
ಭಾಗ್ಯಶ್ರೀ ಕಂಬಳಕಟ್ಟ ರವರು ಬರೆದ ಶಿಶುಗೀತೆ -- ಪಚ್ಚೆಗಿಳಿ
Wednesday, February 23, 2022
ಶಿಶುಗೀತೆ
ಶೀರ್ಷಿಕೆ: ಪಚ್ಚೆ ಗಿಳಿ
ಕಿಟ್ಟು ಪುಟ್ಟು ಸೇರಿಕೊಂಡು
ತೋಟಕೆಂದು ಹೊರಟರು
ಪಚ್ಚೆ ಗಿಳಿಯ ಅಲ್ಲಿ ಕಂಡು
ಹಿಡಿದು ಮನೆಗೆ ತಂದರು ||
ಹಸಿರು ಮೈ ಕೆಂಪು ಕೊಕ್ಕು
ನೋಡಲದೆಷ್ಟು ಚೆಂದವು
ಇಟ್ಟರದಕೆ ಹೆಸರು ರುಕ್ಕು
ಆಡಲು ಬಲು ಆನಂದವು ||
ಬಂಧಿಸಿದರು ತಂದು ಪಂಜರ
ಕಲಿಯಿತದು ಮುದ್ದು ಮಾತು
ನುಡಿಯದು ಬಲು ಸುಂದರ
ಮೈಮರೆತರು ಅದಕೆ ಸೋತು ||
ಮನೆಯಲಾರೂ ಇಲ್ಲದಿರಲು
ಕಳ್ಳ ಬೆಕ್ಕೊಂದು ಬಂದಿತು
ಅರಗಿಣಿ ಒಂಟಿಯಾಗಿರಲು
ತಿಂದು ತೇಗಿ ಮುಗಿಸಿತು ||
ಮನೆಗೆ ಬಂದ ಕಿಟ್ಟು ಪುಟ್ಟು
ಸತ್ತ ಗಿಳಿಯನು ಕಂಡರು
ತಪ್ಪ ಮಾಡಿದೆವು ಬಂಧಿಸಿಟ್ಟು
ಎಂದು ಮನದಿ ನೊಂದರು ||
✍️ ಭಾಗ್ಯಶ್ರೀ ಕಂಬಳಕಟ್ಟ, ಶಿಕ್ಷಕಿ, ಉಡುಪಿ.