ಮಹಿಳಾ ದಿನಾಚರಣೆ ಯ ಕುರಿತು ಜಯಲಕ್ಷ್ಮಿ ಜಿ ಕುಂಪಲ ರವರ ಲೇಖನ
Tuesday, March 7, 2023
"ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ, ಬೆಳಕನಿಟ್ಟು ತೂಗಿದಾಕೆ, ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ ? "
ಜಿ .ಎಸ್. ಶಿವರುದ್ರಪ್ಪನವರ ಹಾಡಿನ ಸಾಲಿನಂತೆ ಮಗಳಾಗಿ ಮಡದಿಯಾಗಿ ,ತಾಯಿಯಾಗಿ ಅಕ್ಕನಾಗಿ ,ಸ್ನೇಹಿತೆ ಯಾಗಿ ಎಲ್ಲಾ ಪಾತ್ರಗಳಿಗೆ ಜೀವ ತುಂಬುವವಳು ಹೆಣ್ಣು. " ಹೆಣ್ಣು ಕುಟುಂಬದ ಕಣ್ಣು," "ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ "ಎಂಬ ಮಾತಿನಂತೆ ಯಾವ ಮನೆಯಲ್ಲಿ ಹೆಣ್ಣು ಉತ್ತಮವಾದ ಶಿಕ್ಷಣವನ್ನು ಪಡೆದಿರುತ್ತಾಳೋ ಆ ಮನೆಯು ಯಾವಾಗಲೂ ಅಭಿವೃದ್ಧಿಯನ್ನು ಹೊಂದಿರುತ್ತದೆ.
ಪ್ರತಿ ವರ್ಷ ಮಾರ್ಚ್ ಎಂಟರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. 1908 ರಲ್ಲಿ ಅಮೇರಿಕಾದಲ್ಲಿ ನಡೆದ ಮಹಿಳಾ ಕಾರ್ಮಿಕರ ಚಳುವಳಿಯಲ್ಲಿ ಸುಮಾರು ಹದಿನೈದು ಸಾವಿರ ದುಡಿಯುವ ಮಹಿಳೆಯರು ಅಮೆರಿಕಾದ ಬೀದಿಗಳಲ್ಲಿ ತಮ್ಮ ಹಕ್ಕಿಗಾಗಿ ಹೋರಾಟವನ್ನು ನಡೆಸಿದರು. ತಮ್ಮ ಕೆಲಸದ ಅವಧಿ, ವೇತನ ತಾರತಮ್ಯ ಮತದಾನದ ಸೌಲಭ್ಯಕ್ಕಾಗಿ ಬೀದಿ ಬೀದಿಗಳಲ್ಲಿ ಚಳುವಳಿಯನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಈ ಮಹಿಳೆಯರು ತಮ್ಮ ಹಕ್ಕನ್ನು ಪಡೆಯುವಲ್ಲಿ ಸಫಲರಾದರು.. ಅಮೇರಿಕಾದ ಸಮಾಜವಾದಿ ಪಕ್ಷವು, ಚಳುವಳಿಯ ಒಂದು ವರ್ಷದ ನಂತರ 1909 ರಲ್ಲಿ ಮಹಿಳಾ ದಿನವನ್ನು ಘೋಷಿಸಿತು. ಮೊದಲ ಬಾರಿಗೆ ವಿಶ್ವಸಂಸ್ಥೆ 1975 ಮಾರ್ಚ್ 8ರಂದು ಅಧಿಕೃತವಾಗಿ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಘೋಷಿಸಿತು .
ಮಹಿಳೆಯರಿಗೆ ಧೈರ್ಯವನ್ನು ತುಂಬಿ ಆಕೆಯ ಹಕ್ಕಿನ ಅರಿವನ್ನು ಮೂಡಿಸಿ ಸ್ವಾವಲಂಬಿ ಜೀವನದತ್ತ ಕೊಂಡೊಯ್ಯುವ ಉದ್ದೇಶದಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ಇಂದು ಮಹಿಳೆಯರು ಗಡಿ ಕಾಯುವುದರಿಂದ ಹಿಡಿದು ಪ್ರತಿಯೊಂದು ಇಲಾಖೆಯಲ್ಲೂ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ಕುಟುಂಬವನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡುವ ಜಾಣ್ಮೆ ಹೊಂದಿದ್ದಾರೆ...
"ಲಿಂಗ ಸಮಾನತೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನ” ಎಂಬುದು 2023 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಧ್ಯೇಯವಾಗಿದೆ.
"ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹ" ಎಂಬ ಮಾತಿನಂತೆ ಎಲ್ಲಿ ಹೆಣ್ಣಿಗೆ ಗೌರವವಿದೆಯೋ ಅಲ್ಲಿ ಸಮೃದ್ಧಿ ನೆಲೆಸುತ್ತದೆ. ನಾಳಿನ ಸುಸ್ಥಿರ ಸಮಾಜಕ್ಕಾಗಿ ಇಂದಿನ ಹೆಣ್ಣು ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡುವುದರೊಂದಿಗೆ ಆರೋಗ್ಯವಂತ ಸಮಾಜವನ್ನು ಕಟ್ಟೋಣ ಎಂಬುದೇ ನಮ್ಮ ಆಶಯ..
"ಮಹಿಳಾ ದಿನಾಚರಣೆಯ ಶುಭಾಶಯಗಳು"
ಜಯಲಕ್ಷ್ಮಿ ಜಿ ಕುಂಪಲ