Mothers day ಕವನ @ ಉಷಾ.ಎಂ
Saturday, May 7, 2022
ಅಮ್ಮಾ ಎಂಬ ಅಚ್ಚರಿಯು.
ಪ್ರೀತಿ, ಪ್ರೇಮಕೆ ರೂಪಕ ನೀನು,
ಮಮತೆಯ ನೆರಳಿನ ನೀಲಬಾನು,
ಜಗದ ಕಣ್ಣಿನ ವಿಸ್ಮಯ ನೀನು,
ಮಕ್ಕಳ ಪಾಲಿನ ಕಾಮಧೇನು,
ಅಮ್ಮಾ ಎಂಬ ಅಚ್ಚರಿಯು!
ಕಂದನ ಮೊಗವನು ಓದುವ ಕನ್ನಡಿ,
ನೋವಿನ ಗೆರೆಗೆ ಮುದುಡುವೆ ನೀ,
ಕರುಳಿನಬಳ್ಳಿಯ ನಾಳಿನ ಮುನ್ನುಡಿ,
ನಲಿವಿನ ರೇಖೆಗೆ ಅರಳುವೆ ನೀ,
ಅಮ್ಮಾಎಂಬ ಅಚ್ಚರಿಯು!
ಒಳಗೂ ಹೊರಗೂ ದುಡಿಯುವೆ ನೀ
ಫಲಶ್ರುತಿ ಬಯಸದ ದೇವತೆಯು,
ನಗುವಿನ ಲೇಪನ ಧರಿಸುವೆ ನೀ
ಲೋಕವು ಅರಿಯದ ಅದ್ಭುತವು,
ಅಮ್ಮಾ ಎಂಬ ಅಚ್ಚರಿಯು.
ಭಾವಗಳೆಲ್ಲವ ಒಡಲಲಿ ನುಂಗುತ,
ಧರಿಸುವೆ ನಾನಾ ಮುಖವಾಡವನು,
ಬಾಳಿನಬೆಳಕಿಗೆ ಹಣತೆಯ ಹಚ್ಚುತ,
ಹೊರಗಟ್ಟುವೆ ನೀ ಅಂಧಕಾರವನು,
ಅಮ್ಮಾಎಂಬ ಅಚ್ಚರಿಯು!
ಮನೆಮನೆಯಲಿ ಬೆಳಕು ಮೂಡಿಸಲು ಮೇಣದ ಬತ್ತಿಯಂತೆ ಕರಗುತ್ತಿರುವ ಎಲ್ಲಾ ತಾಯಂದಿರಿಗೆ ವಿಶ್ವ ಅಮ್ಮಂದಿರ ದಿನದ ಶುಭಾಶಯಗಳು💐💐💐😍
ಉಷಾ.ಎಂ