-->
ಯುಗ ಯುಗಾದಿ ಕಳೆದರೂ......... ವಿಶೇಷ‌ ಲೇಖನದಲ್ಲಿ ‌- ಜಯಲಕ್ಷ್ಮೀ ಜಿ ಕುಂಪಲ

ಯುಗ ಯುಗಾದಿ ಕಳೆದರೂ......... ವಿಶೇಷ‌ ಲೇಖನದಲ್ಲಿ ‌- ಜಯಲಕ್ಷ್ಮೀ ಜಿ ಕುಂಪಲ




ಯುಗ ಯುಗಾದಿ  ಕಳೆದರೂ
 ಯುಗಾದಿ ಮರಳಿ ಬರುತಿದೆ.....
 ಹೊಸ ವರುಷಕೆ ಹೊಸ ಹರುಷವ
 ಹೊಸತು ಹೊಸತು ತರುತಿದೆ......

ಯುಗಾದಿಯು ಚೈತ್ರಮಾಸದ ಮೊದಲ ದಿನ..ಯುಗದ ಆದಿ .. 
ಭಾರತೀಯರಿಗೆ ಹೊಸ ವರ್ಷದ ಆರಂಭ..
ಬೇವು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂಬ ಜೀವನಸಾರ ಹೇಳುವ ದಿನ ಯುಗಾದಿ.

 ಯುಗಾದಿಯಂದು ಮನೆಯನ್ನು ಸ್ವಚ್ಛಗೊಳಿಸಿ  ಹೊಸ ಬಟ್ಟೆ ಧರಿಸಿ, ,ರಂಗೋಲಿಯಿಂದ ಅಲಂಕರಿಸಿ , ರುಚಿಯಾದ ಖಾದ್ಯ ತಯಾರಿಸಿ , ಜೀವನದ ಸಿಹಿ ಕಹಿಗಳನ್ನು ನೆನಪಿಸುವ ಬೇವು-ಬೆಲ್ಲವನ್ನು ಹಂಚುತ್ತಾ ಹೊಸ ವರ್ಷವನ್ನು ನವೋಲ್ಲಾಸ ದಿಂದ ಸ್ವಾಗತಿಸಲಾಗುತ್ತದೆ..

ಯುಗಾದಿ ಬಂತೆಂದರೆ ಎಲ್ಲೆಡೆ ಸಂತಸ ಸಂಭ್ರಮ ತುಂಬಿ ತುಳುಕುತ್ತದೆ.. ಚೈತ್ರ ಮಾಸದಿಂದ ವಸಂತನ ಆಗಮನವಾಗಿ ಗಿಡ-ಮರಗಳೆಲ್ಲ ಚಿಗುರಿ ಹೂ ಬಿಟ್ಟು  ಪ್ರಕೃತಿಯು ಮೈದುಂಬಿ ನಳನಳಿಸುತ್ತಿರುತ್ತದೆ..
ಯುಗಾದಿ ಎಂಬುದು ಸಂಸ್ಕೃತದ ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದೆ.  
ಯುಗ ಎಂದರೆ ಸೃಷ್ಟಿಯ ಕಾಲಮಾನ. ಆದಿ ಎಂದರೆ ಆರಂಭ...

ಯುಗಾದಿ ಹಬ್ಬವು ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆಗಳ ದಿನವಾಗಿದೆ. ಇದು ಬ್ರಹ್ಮದೇವನ ಸೃಷ್ಟಿಯ ದಿನ. ಚೈತ್ರಶುದ್ಧ ಪಾಡ್ಯದಂದು ಸೂರ್ಯೋದಯವಾಗುತ್ತಿರುವಾಗ ಬ್ರಹ್ಮನು ವಿಶ್ವವನ್ನು ಸೃಷ್ಟಿಸಿದನೆಂದೂ, ಅಂದಿನಿಂದ ಕಾಲಗಣನೆಗಾಗಿ ಗ್ರಹ-ನಕ್ಷತ್ರ-ಮಾಸ-ಋತು-ವರ್ಷ ಇವುಗಳನ್ನು ಏರ್ಪಡಿಸಿದನೆಂದೂ ವ್ರತಖಂಡದಲ್ಲೂ ಪುರಾಣಗಳಲ್ಲೂ ಉಲ್ಲೇಖವಿದೆ..

ವೇದಗಳ ಕಾಲದಿಂದಲೂ ಯುಗಾದಿಯ ಮಹಿಮೆ ಕೇಳಿ ಬರುತ್ತಿದೆ . ಎಲ್ಲ ಶಾಸ್ತ್ರ, ಗ್ರಂಥಗಳಲ್ಲಿ ಯುಗಾದಿಯನ್ನು ಕುರಿತು ಹೇಳಲಾಗಿದೆ. ಶ್ರೀರಾಮನು ರಾವಣನನ್ನು ಸಂಹರಿಸಿ ಬಂದಾಗ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪಟ್ಟಾಭಿಷೇಕವಾದ ದಿನ. 

ಅಲ್ಲದೆ ಮಹಾಭಾರತದಲ್ಲಿ ಬರುವ ಚೀದಿರಾಜ್ಯದ ಅರಸು ವಸುವಿನ ಉಗ್ರ ತಪಸ್ಸಿಗೆ ಮೆಚ್ಚಿದ ಇಂದ್ರನು ವೈಜಯಂತಿ ಮಾಲೆಯನ್ನು ಅವನಿಗೆ ಕೊಟ್ಟು, ಚಿನ್ನದ ಕಲಶವುಳ್ಳ ಚಕ್ರಾಧಿಪತ್ಯದ ಧ್ವಜವನ್ನು ರಾಜನ ತಲೆಯ ಮೇಲೆ ಇಟ್ಟಿರುವ ದಿನ ಎಂಬ ಪ್ರತೀತಿ ಇದೆ. 

ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ ಚಂದ್ರಮಾನ ಯುಗಾದಿ ಆಚರಿಸಿದರೆ ತಮಿಳುನಾಡು, ಕೇರಳ ಮತ್ತು ಉತ್ತರ ಭಾರತದ ಕೆಲವು ಸ್ಥಳಗಳಲ್ಲಿ ಸೌರಮಾನ ಯುಗಾದಿ ಆಚರಿಸುತ್ತಾರೆ. ಉತ್ತರಭಾರತದಲ್ಲಿ ಕಾರ್ತಿಕ ಶುದ್ಧ ಪಾಡ್ಯಮಿಯನ್ನು ಯುಗಾದಿಯೆನ್ನುವರು. 
ಈ ಹಬ್ಬವನ್ನು ಭಾರತದಲ್ಲಿ ಬೇರೆ-ಬೇರೆ ಹೆಸರಿನಿಂದ ಆಚರಿಸುವರು. ಕರ್ನಾಟಕದಲ್ಲಿ 'ಯುಗಾದಿ', ಮಹಾರಾಷ್ಟ್ರದಲ್ಲಿ 'ಗುಢಿಪಾಡವಾ', ಆಂಧ್ರ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ 'ಹೊಸ ವರ್ಷದ ಹಬ್ಬ'ವೆಂದು, ಉತ್ತರ ಭಾರತದಲ್ಲಿ 'ಬೈಸಾಖಿ' ಎಂದು ಇದು ಆಚರಿಸಲ್ಪಡುತ್ತದೆ.

ಸುಖ ದುಃಖದ ಸಂಕೇತವಾದ ಬೇವು-ಬೆಲ್ಲವನ್ನು ಹಂಚುವ ಮೂಲಕ ಮಾನವನು ಜೀವನವನ್ನು ಸಮಾನ ದೃಷ್ಟಿಯಿಂದ ನೋಡಬೇಕೆಂಬ ಆಶಯ ಯುಗಾದಿಯದಾಗಿದೆ..

 ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಜೀವನವನ್ನು ಸಮಾನ  ತಕ್ಕಡಿಯಲ್ಲಿ ತೂಗಿ ಕೊಂಡು ಸಾಗಿದರೆ ಜೀವನ  ನಂದನವಾಗುತ್ತದೆ ... 

ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಸುಜ್ಞಾನವೆಂಬ ಬೆಳಕು ಜಗದಲ್ಲಿ ಮೂಡಿದಾಗ ಯುಗಾದಿ ಹಬ್ಬದ ಆಚರಣೆಗೆ ಕಳೆ ಬಂದಂತಾಗುತ್ತದೆ.....

ಬೇವು ಬೆಲ್ಲವ ಹಂಚುತಾ...
ನೋವು ನಲಿವು  ಸಹಿಸುತಾ...
ಅಜ್ಞಾನವು  ಅಳಿಯುತಾ..
ಸುಜ್ಞಾನವು ಮೊಳೆಯುತಾ..
ವಸಂತನ ಆಗಮನವಾಗುತ...
ಹೊಸ ಯುಗಕೆ ನಾಂದಿಯಾಗುತಾ..
 ಬಾಳಿನಲ್ಲಿ ಹೊಸ ಚೈತನ್ಯ ತುಂಬುತಾ.....

 ಹೊಸವರ್ಷ ಯುಗಾದಿಯು ಎಲ್ಲರ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿಯನ್ನು ತರಲಿ...

ಜಯಲಕ್ಷ್ಮೀ ಜಿ ಕುಂಪಲ


Ads on article

Advertise in articles 1

advertising articles 2

Advertise under the article