ಉಷಾ ಎಂ ರವರ ಮನದಲ್ಲಿ ಮೂಡಿದ ಕವನ
Thursday, January 6, 2022
ಮತ್ತೊಮ್ಮೆ ಬಾರದೇ...
ಮರುಕಳಿಸುತ್ತಿವೆ ನೆನಪುಗಳು
ಸಿಗುವವೇ ಮತ್ತೊಮ್ಮೆ?
ಕಳೆದು ಹೋದ ಅಪೂರ್ವ ದಿನಗಳು
ಮನಸ್ಸು ಹಂಬಲಿಸುತ್ತಿದೆ
ಮತ್ತೊಮ್ಮೆ ಬಾರದೇ...
ಬಾಲ್ಯದ ಆ ಸುಂದರ ಕ್ಷಣಗಳು.
ಮಾವಿನ ಮರದಡಿ ಆಡಿದ ಆಟ
ಕಣ್ಣಾ ಮುಚ್ಚೇ ಕಾಡೇ..ಗೂಡೇ...
ಹಣ್ಣಿಗಾಗಿ ಕಾಯುತ್ತಾ ಕೂತ ನೋಟ
ಕುಕ್ಕಜ್ಜಾ ಮಾರಜ್ಜಾ ಎಂಕೊಂಜಿ
ಎಡ್ಡೆ ಕುಕ್ಕು ಪಾಡೇ...
ಕಟ್ಟ ಕಟ್ಟಿದ ತೋಡಿಗೆ ಹಾರಿ
ಹೊತ್ತಿನ ಅರಿವಿಲ್ಲದೆ ಈಜಿದ್ದು
ನೀರಲ್ಲಿ ಮುಳುಗೇಳುತ್ತಾ ಜಾರಿ
ಅಮ್ಮನ ಪುಳಿತ್ತಡರಿನಿಂದ ಪೆಟ್ಟು ತಿಂದದ್ದು.!. !ಮರುಳಿಸುತ್ತಿದೆ!
ಅಂಗಳದಲಿ ಕರುವಿನ ಜತೆಗೆ ಓಡಿ
ಜಾರಿ ಬಿದ್ದು ಗಾಯಮಾಡಿ ಅತ್ತದ್ದು.
ಭತ್ತ ತಿನ್ನಲು ಬರುವ ಹಕ್ಕಿಗಳ ಓಡಿಸಿ
ಕೆಸರುಗದ್ದೆಗೆ ಬಿದ್ದು ಗಹಗಹಿಸಿ ನಕ್ಕಿದ್ದು..! ಮರುಕಳಿಸುತ್ತಿವೆ!
ನಾಯಿ ಬೆಕ್ಕು ಕೋಳಿಗಳ ಜತೆಗೆ
ತೋಟದಲಿ ದೊಂಪಹಾಕಿ ಆಡಿದ
ಮನೆಯಾಟ;
ತಮ್ಮ ತಂಗಿಯರ ಒಟ್ಟು ಸೇರಿಸಿ
ಕಲ್ಲು, ಮಣ್ಣು,ಎಲೆಗಳ ಬಿಸಿಯೂಟ
ಕುಂಟಲ ಹಣ್ಣು ತಿನ್ನುತ್ತಾ ಶಾಲೆಗೆ
ಹೋಗಿ ನಾಲಗೆ ತೋರಿಸಿ ಪಟ್ಟಖಷಿ
ಪಾಠ ಓದಲು ಹೋಗಿ ಮೇಷ್ಟ್ರಿಂದ
ಕಿವಿ ಹಿಂಡಿಸಿ ಕೊಂಡು ಪಟ್ಟ ಬಿಸಿ!!
ತಿನ್ನದ ಹಣ್ಣು ಗಳು,ಆಡದ ಆಟಗಳು
ಕಾಣದ ದೃಶ್ಯ ಗಳು ಇರಲೇ ಇಲ್ಲ
ನೋಡಿದ ಬಯಲಾಟಕ್ಕೆ ಲೆಕ್ಕವಿಲ್ಲ.
ಜಾತ್ರೆ,ಹಬ್ಬ,ಹರಿದಿನ ಬಂದರೆ
ಕಾಲು ನೆಲದ ಮೇಲೆ ಇರುವುದಿಲ್ಲ
ನೆಂಟರಿಷ್ಟರು ಮನೆಗೆ ಬಂದರೆ
ಸಡಗರಕ್ಕೆ ಕೊನೆಯೇ ಇಲ್ಲ.!!
ಸಿಗಬಹುದೇ ಇಂತಹ ಸವಿ ಸವಿ
ಅನುಭವಗಳು ನಮ್ಮಮಕ್ಕಳಿಗೆ?
ಇಲ್ಲದವುಗಳ ಬಿಸುಟು ಇರುವುದರಲ್ಲಿಯೇ ರೆಕ್ಕೆ ಕಟ್ಟಿಕೊಳ್ಳಿ
ನಿಮ್ಮ ಹೊಸಹೊಸ ಕನಸುಗಳಿಗೆ💓💓
ಉಷಾ.ಎಂ
ಸಹಶಿಕ್ಷಕಿ
ಬಿ.ಎಂ.ಪ್ರೌಢಶಾಲೆ
ಉಳ್ಳಾಲ
ಮಂಗಳೂರು