ಕುಸುಮಾ ವಜ್ರ ಕುಮಾರ್ ರವರು ಬರೆದ ಕವನ
Thursday, January 6, 2022
ವಿನಮ್ರ ವಿಜ್ಞಪ್ತಿ
ದುರುಗುಟ್ಟಿ ದುತ್ತೆನ್ನುವ ದುಗುಡ - ದುಮ್ಮಾನಗಳ ಆಟ
ನಗ್ನ ಬಯಕೆಗಳ ಕಡೆಗದೋ ಭಗ್ನ ಭಾವಗಳ ತಡಕಾಟ
ಸತ್ತ ನಂಬಿಕೆಗಳ ಜೊತೆಗೆ ಎಲ್ಲವೂ ಅಗೋಚರ
ಬಾಲಿಷದಲಿ ಕೇಳಿದೊಂದು ಸತ್ಯ...
ವಾಸ್ತವದೊಳಗದು ಮೂಟೆಗಟ್ಟಿದ ಸುಳ್ಳಿನ ಅನಾವರಣ
ಉಳ್ಳವರ ಪ್ರಭುತ್ವದಲ್ಲಿ ಉಳಿದವರ ಏಳಿಗೆಯ ಮಾರಣಹೋಮ
ಸ್ವಾರ್ಥದ ಕರಿನೆರಳಲ್ಲಿ ಬೆತ್ತಲಾದ ಮಾನವೀಯತೆ
ಎಲ್ಲವೂ ಕಾಂಚಣದ ಕರಿನೆರಳ ಪ್ರತಿಷ್ಠೆಗಾಗಿ
ಕಬ್ಬಿದ ಕಾರ್ಮೋಡಕೆ ಭೀತಗೊಂಡಿದ್ದ ಬಾಲ್ಯವದೋ ಶ್ರೇಷ್ಠ
ಮನುಕುಲಕ್ಕೆ ಅಂಟಿಕೊಂಡ ಅಮಾನವೀಯತೆಯ ಕಾಣ್ವ ಯೌವನಕೆ
ಉಪಚಾರವೇ ಇಲ್ಲದ ಉಪಸ್ಥಿತಿ ಮೇಳೈಸುತ್ತಿರಲು ಅನುಪಸ್ಥಿತಿಯಲ್ಲಿ
ಮುಖದೊಳಗಿನ ಕರ್ಮವೇ ಧರ್ಮದೊಳಗಿನ ಮರ್ಮವೆಂದರಿತರೂ
ಪರಿವರ್ತನೆಗಾಗಿ ಕಾಯುವುದೇ ಇಲ್ಲಿಯ ವಿನಮ್ರ ವಿಜ್ಞಪ್ತಿ.
ಕುಸುಮಾ ವಜ್ರಕುಮಾರ್
ಸಹಶಿಕ್ಷಕಿ
ಸ್ಟಾರ್ ಲೈನ್ ಇಂಗ್ಲಿಷ್ ಮಾಧ್ಯಮ ಶಾಲೆ
ಮಂಜೊಟ್ಟಿ - ಬೆಳ್ತಂಗಡಿ
ದಕ್ಷಿಣ ಕನ್ನಡ