ಪರೀಕ್ಷೆ ಮಾನಸಿಕ ಒತ್ತಡವಲ್ಲ ಶೃದ್ಧೆ ಆಸಕ್ತಿ ವಹಿಸಿ ನಿರಂತರ ಅಭ್ಯಾಸ ಮಾಡಿದರೆ ಯಶಸ್ಸು ನಿಶ್ಚಿತ - ಜಯಲಕ್ಷ್ಮಿ ಜಿ ಕುಂಪಲ
Tuesday, March 18, 2025
ವ್ಯಕ್ತಿಯ ಜೀವನಕ್ಕೆ ಭದ್ರಬುನಾದಿಯನ್ನು ನೀಡುವುದೇ ಶಿಕ್ಷಣ. ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷೆ ಯೆಂಬುದು ಹಾಸು ಹೊಕ್ಕಾಗಿದೆ, ಸ್ಪರ್ಧಾತ್ಮಕ ಯುಗದಲ್ಲಿ ವ್ಯಕ್ತಿಯಲ್ಲಿ ಹುದುಗಿರುವ ಸಾಮರ್ಥ್ಯವನ್ನು ಒರೆಹಚ್ಚಲು ಹಾಗೂ ತಮ್ಮ ಮುಂದಿನ ಭವಿಷ್ಯವನ್ನು ನಿರ್ಧರಿಸಿ ಕನಸುಗಳನ್ನು ಪೂರ್ಣಗೊಳಿಸಲು ರಹದಾರಿಯು ಹೌದು. ಪರೀಕ್ಷೆಯು ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ತಾವು ಕಲಿತ ವಿಷಯವನ್ನು ಮೂರು ಗಂಟೆಗಳಲ್ಲಿ ಬರಹ ರೂಪದಲ್ಲಿ ಇಳಿಸಿ ತಮ್ಮ ಸಾಮರ್ಥ್ಯವನ್ನು ಹೊರಹಾಕಲು ಇರುವ ಅಗತ್ಯ ಮಾರ್ಗವಾಗಿದೆ.
ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಲ್ಲಿ ಸ್ವಲ್ಪಮಟ್ಟಿಗೆ ಭಯ, ಆತಂಕ, ದುಗುಡ ಸರ್ವೇಸಾಮಾನ್ಯ ವಿಷಯವಾಗಿದೆ .ನಿರಂತರ ಅಧ್ಯಯನ ,ಶಿಕ್ಷಕರ ಮಾರ್ಗದರ್ಶನ, ಹೆತ್ತವರ ಸಹಕಾರದಿಂದ ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.
"ಯುದ್ಧಕಾಲೇ ಶಸ್ತ್ರಾಭ್ಯಾಸ " ಎಂಬ ಮಾತಿನಂತೆ ಪರೀಕ್ಷೆಯ ಹಿಂದಿನ ದಿನ ಸಿದ್ಧತೆ ಮಾಡುವ ಬದಲು
ವಿದ್ಯಾರ್ಥಿಗಳು ಪರೀಕ್ಷೆಗಾಗಿ ವರ್ಷದ ಪ್ರಾರಂಭದಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು.
📌 ಆಯಾ ದಿನದ ಪಾಠಗಳನ್ನು ಅಂದಂದೇ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.
📌ಮೊಬೈಲ್ ಟಿವಿ ಯಿಂದ ಆದಷ್ಟು ದೂರ ಇದ್ದರೆ ಒಳ್ಳೆಯದು.
📌ವೇಳಾಪಟ್ಟಿಯನ್ನು ಮಾಡಿಕೊಂಡು ಪ್ರತಿಯೊಂದು ವಿಷಯಕ್ಕೂ ಸಮಯವನ್ನು ನಿಗದಿಪಡಿಸಿಕೊಳ್ಳಬೇಕು.
📌ಕಠಿಣ ವಿಷಯಕ್ಕೆ ಹೆಚ್ಚು ಸಮಯವನ್ನು ನಿಗದಿಪಡಿಸಿಕೊಂಡು ಕ್ಲಿಷ್ಟವಾದ ಅಂಶವನ್ನು ಶಿಕ್ಷಕರೊಂದಿಗೆ ಕೇಳಿ ಪರಿಹರಿಸಿಕೊಳ್ಳಬೇಕು
📌ಹಿಂದಿನ ವರುಷಗಳ ಪ್ರಶ್ನ ಪತ್ರಿಕೆಯನ್ನು ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು
📌ಪರೀಕ್ಷೆಯ ಹಿಂದಿನ ದಿನ ಯಾವುದೇ ಗೊಂದಲಕ್ಕೆ ಒಳಗಾಗದೆ ಸರಿಯಾಗಿ ನಿದ್ರೆಯನ್ನು ಮಾಡುವುದು ಅತೀ ಅಗತ್ಯ.
📌ಸಾತ್ವಿಕ ಆಹಾರವನ್ನು ಸೇವಿಸುವುದರೊಂದಿಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕು.
📌ಪರೀಕ್ಷಾ ದಿನದಂದು ಪ್ರವೇಶ ಪತ್ರ ,ಲೇಖನ ಸಾಮಗ್ರಿಗಳು ಇರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
📌ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ತಮ್ಮ ರಿಜಿಸ್ಟರ್ ನಂಬರನ್ನು ಖಾತ್ರಿಪಡಿಸಿಕೊಂಡು ಕೊಠಡಿಯನ್ನು ಪ್ರವೇಶಿಸಬೇಕು.
📌ಪ್ರಶ್ನಾಪತ್ರಿಕೆಯಲ್ಲಿ ರಿಜಿಸ್ಟರ್ ನಂಬರನ್ನು ಸರಿಯಾಗಿ ಬರೆಯಬೇಕು.
📌 ಪ್ರಶ್ನ ಪತ್ರಿಕೆಯನ್ನು ಪೂರ್ಣವಾಗಿ ಓದಿಕೊಂಡ ನಂತರ ಉತ್ತರ ಬರೆಯಲು ಪ್ರಾರಂಭಿಸಬೇಕು.
📌ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಯೋಚಿಸುತ್ತಾ ಸಮಯ ವ್ಯರ್ಥ ಮಾಡುವ ಬದಲು ಮುಂದಿನ ಪ್ರಶ್ನೆಗೆ ಉತ್ತರಿಸುವುದು ಸೂಕ್ತ.
📌ಎಲ್ಲಾ ಉತ್ತರಗಳನ್ನು ಬರೆದ ನಂತರ ಬರೆಯದೆ ಬಾಕಿಯಾಗಿರುವ ಪ್ರಶ್ನೆಗಳಿಗೆ ಯೋಚಿಸಿ ಉತ್ತರ ಬರೆಯಬೇಕು.
📌ಉತ್ತರ ಪತ್ರಿಕೆಯನ್ನು ಕೊಡುವ ಮೊದಲು ಕೊನೆಯಲ್ಲಿ ಒಂದು ಪ್ರಶ್ನೆ ಸಂಖ್ಯೆಯನ್ನು ನೋಡಿ ಉತ್ತರಗಳನ್ನು ಪುನಹ ಪರಿಶೀಲಿಸಬೇಕು.
📌ಪರೀಕ್ಷೆ ಬರೆದ ನಂತರ ಆ ವಿಷಯದ ಬಗ್ಗೆ ಹೆಚ್ಚು ಚರ್ಚೆಯನ್ನು ಮಾಡದೆ ಮುಂದಿನ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು.
ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಖಂಡಿತ ಎಂಬಂತೆ ಅರ್ಹತೆ, ಸಾಮರ್ಥ್ಯಕ್ಕೆ ಅನುಗುಣವಾಗಿ ಶ್ರಮವಹಿಸಿ ಶ್ರದ್ದೆಯಿಂದ ಅಭ್ಯಾಸ ಮಾಡಿದರೆ ಉತ್ತಮ ಫಲಿತಾಂಶ ಸಿಗುವುದರಲ್ಲಿ ಸಂಶಯವಿಲ್ಲ.
ಪರೀಕ್ಷೆಯನ್ನು ಒತ್ತಡ ಎಂದು ಭಾವಿಸದೆ ಮನೆಯ ಹಬ್ಬದಂತೆ ಸಂಭ್ರಮಿಸಿದರೆ ಯಶಸ್ಸು ನಿಶ್ಚಿತ. ಭಾವಿ ಭವಿಷ್ಯ ನಿರ್ಮಾಣದ ಮೊದಲ ಮೆಟ್ಟಿಲನ್ನು ದಾಟಿ ,ಉನ್ನತ ಶಿಕ್ಷಣದ ಹಂತಕ್ಕೆ ಪ್ರವೇಶಿಸಿ, ಯಶಸ್ಸು ಸಾಧಿಸಿ ಸುಂದರ ಬದುಕು ಕಟ್ಟಿಕೊಳ್ಳುವ ಎಲ್ಲಾ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಗೆಲುವಾಗಲಿ ಎಂಬ ಆಶಯ ನಮ್ಮದು.
✍️ಜಯಲಕ್ಷ್ಮಿ ಜಿ ಕುಂಪಲ
ಪರೀಕ್ಷೆ ಬರೆಯುವ ಎಲ್ಲಾ ಮಕ್ಕಳಿಗೂ ಶುಭವಾಗಲಿ,.....
-ಬಿ.ಎಂ.ರಫೀಕ್ ತುಂಬೆ
ಸಂಚಾಲಕರು, ಮಕ್ಕಳ ಜೋಳಿಗೆ