ಮಂಜು... ಹನಿ - ಶ್ರೀಮತಿ ಉಷಾರವರ ಕಥೆ..
Wednesday, September 28, 2022
ಮಂಜು..ಹನಿ
ಮರದ ಗೂಡಿನ ಒಂದು ಮೂಲೆಯಲ್ಲಿ ತಾನಿಟ್ಟಿರುವ ಏಳು ಬಿಳಿ ಬಿಳಿ ಮೊಟ್ಟೆಗಳನ್ನು ನೋಡಿ ಸುಬ್ಬಿ ಹೇಂಟೆಗೆ ಅಪಾರ ಖುಷಿ. "ಈ ಸಲ ಇಷ್ಟೇ ಸಾಕು, ಇವುಗಳಿಗೆ ಕಾವು ಕೊಟ್ಟು ಮರಿಗಳನ್ನು ಚೆನ್ನಾಗಿ ಸಾಕಬೇಕು" ಸುಬ್ಬಿಯ ಮಾತಿಗೆ ಮಂಜ ಹುಂಜನೂ ಹೌದೆಂದು ತಲೆಯಾಡಿಸಿದ.ಸುಬ್ಬಿ ಬಹಳ ಸಡಗರದಿಂದ ಮೊಟ್ಟೆಗಳಿಗೆ ಕಾವು ಕೊಟ್ಟಳು.ಏಳು ಮರಿಗಳೂ ಆರೋಗ್ಯವಂತರಾಗಿ ಹೊರಬಂದುವು.ಅಬ್ಬಾ! ಎಂಥ ಚಂದದ ಮರಿಗಳು! ಸುಬ್ಬಿ ಮತ್ತು ಮಂಜನ ಸಂತಸಕ್ಕೆ ಪಾರವೇ ಇಲ್ಲ.ತಾಯಿಯ ಬೆಚ್ಚನೆಯ ರೆಕ್ಕೆಯಡಿಯಲ್ಲಿ ಏಳು ಮರಿಗಳೂ ಮುದ್ದಾಗಿ ಬೆಳೆಯುತ್ತಿದ್ದವು.ಈಗ ಸುಬ್ಬಿ ಮತ್ತು ಮಂಜುಗೆ ಮಕ್ಕಳಿಗೆ ನಾಮಕರಣ ಮಾಡುವ ಸಡಗರ.ಮೂರು ಗಂಡು ಮತ್ತು ನಾಲ್ಕು ಹೆಣ್ಣು ಮರಿಗಳು.ಸುಬ್ಬಿ ಮತ್ತು ಮಂಜು ತಮ್ಮ ಸ್ನೇಹಿತರ ಜೊತೆಯಲ್ಲಿ ಚರ್ಚಿಸಿದರೂ ಕೊನೆಗೆ ತಾವೇ ಆಯ್ಕೆ ಮಾಡಿರುವ ಹೆಸರುಗಳನ್ನೇ ಇಟ್ಟರು.ಗಂಡು ಮಕ್ಕಳಿಗೆ ವಿಟ್ಟು,ಮಿಟ್ಟು,ಚಿಟ್ಟು ಎಂದೂ ಹೆಣ್ಣು ಮಕ್ಕಳಿಗೆ ದಿನಿ,ಇನಿ,ಮಿನಿ ಮತ್ತು ಹನಿ. ಎಂದು ನಾಮಕರಣ ಮಾಡಿ ಎಲ್ಲರಿಗೂ ಸಿಹಿ ಹಂಚಿದರು.ಮುದ್ದು ಮಕ್ಕಳಿಗೆ ಸುಂದರವಾದ ಹೆಸರುಗಳು ಎಂದು ಎಲ್ಲರೂ ಕೊಂಡಾಡಿದರು.
ದಿನಗಳು ಕಳೆದಂತೆ ಮರಿಗಳು ಗೂಡಿನಿಂದ ಹೊರ ಬರಲು ತವಕಿಸುತ್ತಿದ್ದವು.ಕಿಲಕಿಲವೆಂದು ಕಲರವ ಮಾಡುವ ಪುಟ್ಟ ಮರಿಗಳ ಬಗೆಗೆ ಈಗ ಸುಬ್ಬಿಗೆ ಹೆಚ್ಚಿನ ಕಾಳಜಿ.ಗೂಡಿನ ಹೊರ ಬಂದರೆ ಮೈತುಂಬಾ ಕಣ್ಣಾಗಿರಬೇಕು.ಗೂಡ ಹೊರಗಿನ ಒಂದು ಮರದಲ್ಲಿ ಕಾಗೆಯ ಗೂಡಿನಲ್ಲಿ ಕಾಗೆ ಮರಿಗಳು ಬೆಳೆಯುತ್ತಿದ್ದವು.ಆ ಕಾಗೆ ಸದಾ ಆಹಾರಕ್ಕಾಗಿ ಹೊಂಚು ಹಾಕುತ್ತಿತ್ತು.ಇನ್ನೊಂದೆಡೆ ಅದಕ್ಕಿಂತ ಭಯಾನಕವಾದ ಗಿಡುಗವೊಂದು ಅಲ್ಲಿಯೇ ಸುತ್ತ ಮುತ್ತ ಹಾರುತ್ತಾ ತನ್ನ ಸೂಕ್ಷ್ಮ ಕಣ್ಣುಗಳಿಂದ ಅವಲೋಕನ ಮಾಡುತ್ತಿತ್ತು.ಕಾಗೆ ಮತ್ತು ಹದ್ದಿಗೆ ಖಂಡಿತಾ ಗೊತ್ತಿದೆ ಸುಬ್ಬಿ ಗೂಡಲ್ಲಿ ಏಳು ಮರಿಗಳು ಇವೆಯೆಂದು.ಈಗ ಸುಬ್ಬಿ ಬಹಳ ಬಹಳ ಎಚ್ಚರಿಕೆಯಿಂದ ಇರುತ್ತಿದ್ದಳು.ಅವಳಿಗೂ ಗೊತ್ತಿದೆ ತಾನು ಸ್ವಲ್ಪ ಎಚ್ಚರ ತಪ್ಪಿದರೂ ಸಾಕು,ಯಾವಾಗ ಬೇಕಾದರೂ ಕಾಗೆ ಅಥವಾ ಹದ್ದು ಹಾರಿ ಬಂದು ಮರಿಗಳನ್ನು ಎತ್ತಿಕೊಂಡು ಹೋಗುವ ಸಾಧ್ಯತೆ ಇದೆಯೆಂದು.ಆದರೆ ಈಗೀಗ ಮಂಜನಿಗೆ ಸುಬ್ಬಿ ಮತ್ತು ಮರಿಗಳ ಬಗೆಗೆ ಆಸಕ್ತಿ ಕಡಿಮೆಯಾಗುತ್ತಾ ಇದೆ.ಇದಕ್ಕೆ ಕಾರಣವೂ ಇದೆ.ಈ ಸುಬ್ಬಿ ಯಾವಾಗಲೂ ತನ್ನ ಮರಿಗಳ ಜೊತೆಯಲ್ಲಿಯೇ ಇರುತ್ತಾಳೆ.ತನ್ನನ್ನು ಗಮನಿಸುವುದು ಬಿಡಿ ತನಗೆ ತನ್ನ ಮರಿಗಳನ್ನು ನೋಡುವ ಅವಕಾಶವನ್ನೇ ಕೊಡುವುದಿಲ್ಲ."ಈ ಕೆಲಸ ನಿನಗೆಲ್ಲ ಆಗದು" ಎಂದೇ ಅವಳ ಮಾತು.ಅದಕ್ಕೆ ಮಂಜ ಕೂಡಾ ಗೆಳತಿ 'ಸಿರಿ' ಯ ಜೊತೆಯಲ್ಲಿ ಕಾಲ ಕಳೆಯುವುದನ್ನು ಅಭ್ಯಾಸ ಮಾಡಿದನು. ಮಂಜ ಸಿರಿಯ ಜೊತೆಗೆ ಇರುವುದನ್ನು ದೂರದಿಂದ ನೋಡುತ್ತಿದ್ದ ಸುಬ್ಬಿಗೆ ಮಂಜನಲ್ಲಿ ಕೋಪ ಬರುತ್ತಿದ್ದರೂ ಮಕ್ಕಳ ರಕ್ಷಣೆಯ ಕಾಯಕದಲ್ಲಿ ಎಲ್ಲವನ್ನೂ ಮರೆತಳು.ದಿನಗಳು ಕಳೆದಂತೆ ಮರಿಗಳೆಲ್ಲಾ ಅಮ್ಮನ ನೆರಳಿನಾಸರೆಯಲ್ಲಿ ಬೆಳೆಯುತ್ತಾ, ಅಮ್ಮ ಮಾಡಿದಂತೆ ಅನುಕರಿಸಲು ಶುರು ಮಾಡುತ್ತಿದ್ದವು.ಅಮ್ಮ ಹುಡುಕಿಕೊಟ್ಟ ಆಹಾರವನ್ನು ಕುಕ್ಕಿ ತಿನ್ನಲು ಕಲಿಯಲಾರಂಭಿಸಿದವು.
ಆದರೆ ಇದ್ದಕ್ಕಿದ್ದಂತೆ ತಾಯಿ ಸುಬ್ಬಿಯ ವರ್ತನೆಯಲ್ಲಿ ಒಂದು ವಿಚಿತ್ರ ಬದಲಾವಣೆ ಕಂಡು ಬಂತು.ಅದರ ಕರಳಿನ ಕುಡಿ,ಅದೂ ಹೆಣ್ಣು ಮಗು 'ಹನಿ' ಯ ಬಗೆಗೆ ಒಂದು ರೀತಿಯ ನಿರ್ಲಕ್ಷ್ಯ ಭಾವವನ್ನು ತೋರಲಾರಂಭಿಸಿತು ,ಹನಿ ಹತ್ತಿರ ಹೋದಾಗ ಕಾಲಿನಿಂದ ಒದೆಯಿತ್ತಿತ್ತು,ಆಹಾರಕ್ಕಾಗಿ ಹನಿ ತನ್ನ ಬಾಯಿಯನ್ನು ಅಮ್ಮನ ಮುಂದೆ ತಂದರೆ ತಲೆಗೆ ಕುಕ್ಕುತ್ತಿತ್ತು.ಮೊದಮೊದಲು ಹನಿ ಇದರ ಬಗೆಗೆ ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ.ಎಲ್ಲರಿಗೂ ಒಮ್ಮೊಮ್ಮೆ ಹೀಗೆ ಮಾಡುತ್ತಾಳೆ ಎಂದೇ ಭಾವಿಸಿದಳು..ಆದರೆ ದಿನ ಕಳೆದಂತೆ ಹನಿಗೆ ಸ್ಪಷ್ಟವಾಗುತ್ತಾ ಬಂತು,ಬೇರೆ ಎಲ್ಲಾ ಮಕ್ಕಳ ಜೊತೆಗೆ ಬಹಳ ಖುಷಿಯಿಂದ ಇರುವ ಅಮ್ಮ ನನ್ನನ್ನು ಮಾತ್ರ ತಿರಸ್ಕರಿಸುತ್ತಾಳೆ,ನನಗೆ ಮಾತ್ರ ಕುಟ್ಟಿ ನೋವು ಕೊಡುತ್ತಾಳೆ ಎಂದು ತಿಳಿಯಿತು.ಆದರೂ ಅಮ್ಮ ತಮಾಷೆ ಮಾಡುತ್ತಿರಬಹುದು ಎಂದು ಅಮ್ಮನ ಹಿಂದೆ ಮುಂದೆ ಬೇಕೆಂದೇ ಸುಳಿಯಲಾರಂಭಿಸಿದಳು.ಆದರೆ ಸುಬ್ಬಿ ಹನಿಯ ತಲೆಗೆ ಬಲವಾಗಿ ಕುಟ್ಟಿ ಕುಟ್ಟಿ ಓಡಿಸಿದಳು.ಆ ನೋವನ್ನು ಹನಿಯಿಂದ ಸಹಿಸಲು ಆಗಲಿಲ್ಲ. ಒಂದು ಬದಿಯಲ್ಲಿ ದೈಹಿಕ ನೋವು,ಇನ್ನೊಂದು ಬದಿಯಲ್ಲಿ ಅಮ್ಮ ಏಕೆ ಹೀಗೆ ಮಾಡುತ್ತಾಳೆ ಎಂಬ ಮಾನಸಿಕ ನೋವು.ದೇಹದ ಮೇಲಾಗುವ ನೋವನ್ನಾದರೂ ಸಹಿಸಬಹುದು ಆದರೆ ಮನಸ್ಸಿನ ನೋವನ್ನು ಸಹಿಸುವುದು ಹೇಗೆ? ನಾನು ಏನು ಮಾಡಿದೆ ಎಂದು ಅಮ್ಮ ನನ್ನ ದೂರ ಇಡುತ್ತಾಳೆ?. ಅಮ್ಮನ ರೆಕ್ಕೆಯೊಳಗೆ ಬೆಚ್ಬಗೆ ಮಲಗುವ ಅವಕಾಶ ನನಗೆ ಏಕೆ ಇಲ್ಲ..ಹೀಗೆಲ್ಲಾ ಯೋಚಿಸುತ್ತಾ ಹನಿ ಅಮ್ಮ ಮತ್ತು ಸೋದರ,ಸೋದರಿಯರಿಂದ ದೂರ ಉಳಿದಳು.. ಗೂಡಿನ ಹೊರಗಿರುವ ಪುಟ್ಟ ದಾಸವಾಳದ ಗಿಡದಡಿ ಮುದುಡಿ ಕೂರುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ.ರಾತ್ರಿಯಂತೂ ಹನಿಯ ಸ್ಥಿತಿಯನ್ನು ಹೇಳಲಸಾಧ್ಯ.ಅಮ್ಮ ಮತ್ತು ಬೇರೆ ಮಕ್ಕಳು ಖುಷಿಯಿಂದ ಗೂಡಿನೊಳಗೆ ಸೇರಿ ಬೆಚ್ವನೆ ಮಲಗುತ್ತಿದ್ದರೆ ಇಲ್ಲಿ ಗೂಡಿನ ಹೊರಗೆ ಹನಿ ಮರದ ಬುಡದಲ್ಲಿ ಕುಳಿತು ರಾತ್ರಿಯನ್ನು ಕಳೆಯುತ್ತಿತ್ತು.ಹನಿ ಗೆ ನಿದ್ದೆಯೇ ಬರುತ್ತಿರಲಿಲ್ಲ, ಒಂದು ಬದಿಯಲ್ಲಿ ಭಯ,ಇನ್ನೊಂದು ಕಡೆ ಚಳಿ. ಭಯ,ಚಳಿ,ದುಃಖದ ಜೊತೆಯಲ್ಲಿ ರಾತ್ರಿ ಗಳನ್ನು ಕಳೆಯುವುದು ಹನಿಗೆ ತುಂಬಾನೇ ಕಷ್ಟವಾಗುತ್ತಿತ್ತು. ಬೆಳಗ್ಗೆ ಎದ್ದು ಅಮ್ಮ ಮತ್ತು ಮಕ್ಕಳು ಗೂಡಿನಿಂದ ನಗುನಗುತ್ತಾ ಹೊರಗೆ ಬಂದು,ತೋಟದ ಕಡೆಗೆ ಹೊರಟಾಗ ಹನಿ ಕೂಡಾ ಮೆಲ್ಲಗೆ ಅವರ ಹಿಂದೆ ಹೋದಳು..ಆದರೆ ಸುಬ್ಬಿ ಓಡಿಸಿಕೊಂಡು ಹೋಗಿ ತಲೆಗೆ ಸಿಕ್ಕಾಪಟ್ಟೆ ಕುಟ್ಟಿ ರಕ್ತ ಬರುವ ಹಾಗೆ ಮಾಡಿತು.ನೋವಿನಿಂದ ಕಿರುಚುತ್ತಾ ಹನಿ ದಾಸವಾಳದ ಗಿಡದ ಬುಡದಲ್ಲಿ ಅಳುತ್ತಾ ಕೂತಳು..ಉಳಿದ ಮಕ್ಕಳು ಕೂಡಾ ಅಮ್ಮನ ಈ ಪಕ್ಷಪಾತವನ್ನು ಪ್ರಶ್ನಿಸಲೇ ಇಲ್ಲ. ಅವುಗಳು ಅವುಗಳ ಪಾಡಿಗೆ ಅಮ್ಮನ ಸುರಕ್ಷತೆಯ ಕಕ್ಷೆಯಲ್ಲಿ ಸುಖವಾಗಿ ಓಡಾಡಿಕೊಂಡು ಇರುತ್ತವೆ."ಯಾಕೆ ಎಲ್ಲರಿಗೂ ನಾನು ಬೇಡವಾದೆ"? ಎಂಬ ಪ್ರಶ್ನೆಗೆ ಹನಿಯ ಪುಟ್ಟಮನಸ್ಸಿಗೆ ಉತ್ತರ ಸಿಗಲೇ ಇಲ್ಲ.ಅಮ್ಮ ಮತ್ತು ಸೋದರ ಸೋದರಿಯರನ್ನು ದೂರದಿಂದಲೇ ನೋಡಿ ಕಣ್ಣೀರು ಹಾಕುವುದೇ ಹನಿಯ ಕೆಲಸವಾಯಿತು.ಈಗಂತೂ ಹನಿಗೆ ಅಮ್ಮನ ಸ್ವರವನ್ನು ಕೇಳಿದಾಗ ಎದೆಯಲ್ಲಿ ನಡುಕ ಶುರುವಾಗುತ್ತದೆ.ಅಮ್ಮ ಹತ್ತಿರ ಬಂದರೆ ಸಾಕು ದಿಕ್ಕಾಪಾಲಾಗಿ ಓಡುವಷ್ಟು ಹನಿ ಭಯಭೀತಳಾಗಿದ್ದಾಳೆ.ಏನೂ ತಿನ್ನದೆ,ಏನೂ ಕುಡಿಯದೆ ಗಿಡದ ಪೊದೆಯಲ್ಲಿ ಬಚ್ವಿಟ್ಟುಕೊಳ್ಳತ್ತಿದ್ದ ಹನಿಯ ಮನಸ್ಸಿನಲ್ಲಿ ಒಂದು ರೀತಿಯ ಶೂನ್ಯ ಭಾವ ಆವರಿಸುತ್ತಿತ್ತು.
ಒಂದು ದಿನ ಮಂಜನ ಕಣ್ಣಿಗೆ ಹನಿಯ ಏಕಾಂಗಿತನ ಕಂಡು ಬಂತು.ಅಂಗಳದ ಒಂದು ಮೂಲೆಯಲ್ಲಿ ಪುಟ್ಟ ಗಿಡದ ಬುಡದಲ್ಲಿ ಬಿಕ್ಕಿಬಿಕ್ಕಿ ಅಳುತ್ತಿರುವ ಹನಿಯನ್ನು ಕಂಡಿನು .ಮಂಜ ಹತ್ತಿರ ಬಂದು ಹನಿಯನ್ನು ನೋಡಿದನು..ಪುಟ್ಟ ಕಂಗಳಲ್ಲಿ ಚಿಮ್ಮುತ್ತಿರುವ ಕಣ್ಣೀರನ್ನು ಕಂಡು ಮಂಜನ ಹೃದಯ ಕರಗಿ ಹೋಯಿತು.ಅಲ್ಲಿಯೇ ಮಣ್ಣಿನಡಿಯಲ್ಲಿ ಹುದುಗಿದ್ದ ಹುಳುಹುಪ್ಪಡಿಗಳನ್ನು ಹೆಕ್ಕಿ ಹನಿಯ ಬಾಯಿಗಿಟ್ಟರೆ ಹನಿ 'ಬೇಡ' ಹೇಳಿತು. ಏನಾಯಿತೆಂದು ಮಂಜ ವಿಚಾರಿಸಿದಾಗ ಹನಿ ತನ್ನ ನೋವಿನ ಕತೆಯನ್ನು ಹೇಳಿದಳು..ಸಿಟ್ಟುಗೊಂಡ ಮಂಜ ಹನಿಯನ್ನು ಕರೆದುಕೊಂಡು ಸುಬ್ಬಿಯನ್ನು ಹುಡುಕಿಕೊಂಡು ಹೋದನು." ಏನೇ ಸುಬ್ಬಿ, ಹನಿಯನ್ನು ಕಂಡರೆ ನಿನಗೆ ಆಗುವುದಿಲ್ಲ ಅಂತೆ,ಅದಕ್ಕೆ ಕುಟ್ಟಿ ನೋವು ಮಾಡುತ್ತಿಯಂತೆ ,ಏನಾಗಿದೆ ನಿನಗೆ.ಹನಿ ಕೂಡಾ ನಿನ್ನ ಮಗಳಲ್ಲವೇ?" ಧೈರ್ಯದಿಂದ ಪ್ರಶ್ನಿಸಿದ ಮಂಜ. " ಲೇ ಮಂಜಾ, ನನ್ನ ಸುದ್ದಿಗೆ ನೀನು ಬರ್ಬೇಡ,ಏನು ಸಿರಿಯ ಜೊತೆಯಲ್ಲಿ ಇರುವಾಗ ನಮ್ಮ ನೆನಪೇ ನಿನಗಿರುವುದಿಲ್ಲ,ಏನು ಅವಳೊಂದಿಗೆ ಜಗಳ ಮಾಡಿರುವೆಯಾ? ಹನಿಯಂತೆ ಹನಿ ಅವಳು ನನ್ನ ಮಗಳೇ ಅಲ್ಲ, ಬೇಕಿದ್ರೆ ನೀನೇ ಸಾಕಿಕೋ" ಎಂದು ಮುಖಕ್ಕೆ ಹೊಡೆದಂತೆ ಸುಬ್ಬಿಯಿಂದ ಉತ್ತರ ಬಂತು." ನಿನಗೆ ಏನಾಗಿದೆ ಸುಬ್ಬಿ? ಆ ಹೊನ್ನೆ ಮರದಲ್ಲಿ ಗೂಡು ಕಟ್ಟಿರುವ ಕಾಗೆಯನ್ನು ನೋಡಿ ಸ್ವಲ್ಪ ಕಲಿ. ಕೋಗಿಲೆ ಕದ್ದು ಇಟ್ಟಿರುವ ಮೊಟ್ಟೆಗಳಿಗೂ ಕಾವು ಕೊಟ್ಟು ಮರಿಗಳನ್ನು ಮಾಡಿ ಸಾಕುವ ಆ ಕಾಗೆ ಎಲ್ಲಿ? ನೀನು ಎಲ್ಲಿ? ಕಾಗೆ ಯಾರದೋ ಮರಿಗಳನ್ನು ತನ್ನದೆಂಬ ಪ್ರೀತಿಯಲ್ಲಿ ಸಾಕಿದರೆ ,ನೀನು ನಿನ್ನದೇ ಮರಿಯನ್ನು ಬೇಡ ಎಂದು ದೂರ ಮಾಡುತ್ತಿ ಅಲ್ವ..ಇದು ಸರಿಯಾ? ಮಂಜನ ಪ್ರಶ್ನೆಗೆ ಸುಬ್ಬಿ " ಮಂಜಾ ,ನಿನ್ನ ಕತೆಯನ್ನು ಕೇಳಲು ನನಗೆ ಸಮಯವಿಲ್ಲ.ಆ ಅನಿಷ್ಟದವಳು ನನಗೆ ಬೇಡ, ಅವಳು ನನಗೆ ಮಗಳೇ ಅಲ್ಲ,ಸುಮ್ಮನೆ ಅನಗತ್ಯ ಮಾತುಕತೆ ಬೇಡ" ಎಂದು ಹೇಳಿ" ಬನ್ನಿ ಮಕ್ಕಳಾ ಆ ಮರದ ಬುಡದ ಬಳಿ ಸ್ವಲ್ಪ ವಿಶ್ರಮಿಸೋಣ" ಎಂದು ಮಕ್ಕಳನ್ನು ಕರೆದುಕೊಂಡು ಹೋಗಿಯೇ ಬಿಟ್ಟಳು.ಮಂಜನಿಗೆ ನಿಂತ ನೆಲವೇ ಕುಸಿದಂತೆ ಆಯಿತು.ತಾನೇ ಇಟ್ಟ ಏಳು ಮೊಟ್ಟೆಗಳನ್ನು ಮರಿ ಮಾಡಿ ಅದರಲ್ಲಿ ಒಂದು ತನ್ನದಲ್ಲ ಎಂದು ಹೇಳುವ ಸುಬ್ಬಿ ಅವನಿಗೆ ಒಂದು ಪ್ರಶ್ನೆಯಾಗಿ ಕಂಡಳು.ಏನೇ ಆದರೂ ಸರಿ ತಾನು ಇನ್ಮು ಹನಿಯನ್ನು ಬಿಡಬಾರದು.ಬೇಕಿದ್ದರೆ ನೀನೇ ಸಾಕಿಕೋ ಎಂದು ಸವಾಲು ಹಾಕಿದ್ದಾಳೆ, ಸಾಕುತ್ತೇನೆ, ಸಾಕಿ ತೋರಿಸುತ್ತೇನೆ ಎಂದು ತಿರುಗಿ ನೋಡುತ್ತಾನೆ ಅಲ್ಲಿ ಹನಿ ಕಾಣಿಸುವುದಿಲ್ಲ. " ಹನಿ ಹನಿ " ಎಂದು ಕರೆಯುತ್ತಾ ಮಂಜ ಓಡುತ್ತಾನೆ.
"ಅವಳು ನನ್ನ ಮಗಳೇ ಅಲ್ಲ" ಎಂಬ ಅಮ್ಮನ ಮಾತಿನಿಂದ ಆಘಾತಕ್ಕೆ ಒಳಗಾದ ಹನಿಗೆ ಬದುಕಿನಲ್ಲಿ ಜುಗುಪ್ಸೆ ಬಂದಿತು.ಏಕಾಂಗಿಯಾಗಿ ಬದುಕಲು ನನ್ನಿಂದ ಸಾಧ್ಯವಿಲ್ಲ. ಬದುಕಿದರೂ ಯಾರಿಗಾಗಿ, ಯಾತಕ್ಕಾಗಿ ಬದುಕಬೇಕು,ನನಗೆ ಬದುಕಿನಲ್ಲಿ ಯಾವ ಸಂಭ್ರಮವೂ ಇಲ್ಲದಿರವಾಗ ಸಾಯುವುದೇ ಒಳ್ಳೆಯದು" ಎಂದು ನಿರ್ಧರಿಸಿದ ಹನಿ ಅಲ್ಲಿಯೇ ಇದ್ದ ಬಾವಿಕಟ್ಟೆಯ ದಂಡೆಗೆ ಏರಲು ಪ್ರಯತ್ನಿಸುತ್ತಾಳೆ.ಒಮ್ಮೆ ದಂಡೆಗೆ ಏರಲು ಆದರೆ ನೇರ ನೀರಿಗೆ ಹಾರಿ ಸಾಯಬಹುದು ಎಂದು ಯೋಚಿಸುತ್ತಾ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಾಳೆ.ಅದರೆ ಆ ಪುಟ್ಟ ಹನಿಗೆ ಅಷ್ಟು ಎತ್ತರದ ದಂಡೆಗೆ ಏರಲು ಆಗುವುದೇ ಇಲ್ಲ.ಅಷ್ಟರಲ್ಲಿ ಮಂಜ "ಹನಿ ಹನಿ " ಎಂದು ಕರೆಯುತ್ತಾ ಅಲ್ಲಿಗೇ ಬರುತ್ತಾನೆ,ನೋಡುತ್ತಾನೆ ಹನಿ ಬಾವಿಯ ದಂಡೆಗೆ ಏರಲು ಪ್ರಯತ್ನ ಮಾಡುತ್ತಾಳೆ.ಹನಿಯ ಆಲೋಚನೆ ಮಂಜನಿಗೆ ಗೊತ್ತಾಗುತ್ತದೆ. ಇಲ್ಲ ನಾನು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ನಿರ್ಧರಿಸಿದ ಮಂಜ ಓಡಿ ಹೋಗಿ ಹನಿಯನ್ನು ಅಪ್ಪಿಕೊಳ್ಳುತ್ತಾನೆ.ಇಬ್ಬರೂ ತುಂಬಾ ಹೊತ್ತು ಕಣ್ಣೀರು ಹಾಕುತ್ತಾರೆ." ನೀನು ಸಾಯಬಾರದು ಮಗಳೇ, ನಿನಗೆ ನಾನಿದ್ದೇನೆ, ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ. ಇಂದು 'ವಿಶ್ವ ಹೆಣ್ಣು ಮಗಳ ದಿನ' ಇಂದು ನಾನು ನಿನಗೆ ಮಾತು ಕೊಡುತ್ತೇನೆ, ನಿನ್ನ ಬದುಕಿನಲ್ಲಿ ಯಾವತ್ತಿಗೂ ಕತ್ತಲೆ ಕವಿಯದಂತೆ ನಾನು ಬೆಳಕಾಗಿ ಇರುತ್ತೇನೆ ಆದರೆ ಇನ್ನು ಯಾವತ್ತೂ ನೀನು ಸಾಯುವ ಯೋಚನೆ ಮಾಡಬಾರದು" ಎಂದು ಮಗಳನ್ನು ಇನ್ನಷ್ಟು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾನೆ.ಅಷ್ಟರಲ್ಲಿ ಮಂಜನನ್ನು ಹುಡುಕಿಕೊಂಡು ಅಲ್ಲಿಗೆ ಬಂದ ಅವನ ಗೆಳತಿ ಸಿರಿ , ಹನಿಯನ್ನು ನೋಡಿ" ತಾಯಿಗೆ ಬೇಡವಾದ ಇವಳ ಬಗೆಗೆ ನಿನಗ್ಯಾಕೆ ಇಷ್ಟು ಮಮಕಾರ,ಅವಳನ್ನು ಬಿಟ್ಟುಬಿಡು.ನಮಗೆ ಈ ರಗಳೆ ಬೇಡ.ಬಾ ನಾವು ಹೋಗುವ.ಮನೆಯ ಹಿಂದಿನ ಮರದಡಿಯಲ್ಲಿ ರಾಶಿ ರಾಶಿ ಗೆದ್ದಲು ಹುಳಗಳು ಬಿದ್ದಿವೆಯಂತೆ ಹೋಗಿ ತಿನ್ನೋಣ " ಎಂದು ಅವಸರಿಸಿದಳು." ಇಲ್ಲ ಸಿರಿ ನನಗಿನ್ನು ಯಾರೂ ಬೇಡ.ಪಾಪ ನೋಡು ಈ ಹನಿಯನ್ನು, ತನಗೆ ಯಾರೂ ಇಲ್ಲವೆಂದು ಬಾವಿಗೆ ಹಾರಲು ಹೊರಟಿದ್ದಳು.ನಾನು ಬಂದ ಕಾರಣ ಉಳಿದಳು,ನನ್ನ ಪುಣ್ಯ,ಇನ್ನು ಮುಂದೆ ಅವಳಿಗೆ ನಾನೇ ಎಲ್ಲಾ.ನಾನೇ ಅವಳನ್ನು ಸಾಕಿ ದೊಡ್ಡವಳನ್ನಾಗಿ ಮಾಡುತ್ತೇನೆ.ಅವಳ ಕಾಲ ಮೇಲೆ ಅವಳೇ ನಿಲ್ಲುವ ಹಾಗೆ ಬೆಳೆಸುತ್ತೇನೆ" ಎಂದು ಮಂಜ ಗದ್ಗದಿತನಾಗುತ್ತಾನೆ.ಕೋಪಗೊಂಡ ಸಿರಿ" ಹೋಗು ಹೋಗು, ನನಗೇನು ನಿನ್ನ ಅಗತ್ಯ ಇಲ್ಲ.ಏನೋ ಪಾಪ ಯಾರೂ ಇಲ್ಲ ಎಂದು ನಿನ್ನ ಜೊತೆಯಲ್ಲಿ ಇದ್ದರೆ ಈಗ ನನ್ನನ್ನೇ ನಿರ್ಲಕ್ಷ್ಯ ಮಾಡುವಷ್ಟು ಬೆಳೆದಿದ್ದಿ ಅಲ್ವ? ನನಗೆ ನೀನೇ ಬೇಕೆಂದೇನೂ ಇಲ್ಲ .ಅಲ್ಲಿ ನೋಡು ನನಗಾಗಿ ಆಚೆ ಮನೆಯ ಗರಿ,ನಿದಾ ಎಲ್ಲಾ ಕಾಯುತ್ತಿದ್ದಾರೆ.ನಾನು ಅವರೊಂದಿಗೆ ಇರುತ್ತೇನೆ.ನೀನು ಇನ್ನು ನನ್ನ ಸುದ್ದಿಗೆ ಬರ್ಬೇಡ..ಬಂದರೆ ಜಾಗ್ರತೆ " ಎಂದು ಎಚ್ಚರಿಸಿ ಹೋಗಿಯೇ ಬಿಟ್ಟಳು.ಪ್ರೀತಿಯ ಗೆಳತಿ ಸಿರಿಯ ಸ್ನೇಹವನ್ನು ಕಳೆದುಕೊಂಡ ಮಂಜನಿಗೆ ಹೃದಯ ಭಾರವಾಯಿತು.ಆದರೆ ಬೇಸರ,ದುಃಖ, ನೋವು,ಹತಾಶೆಯಲ್ಲಿ ಮುಳುಗಿದ್ದ ಪುಟ್ಟ ಹನಿಯನ್ನು ನೋಡಿ ಮಂಜ ಎಲ್ಲವನ್ನೂ ಮರೆತುಬಿಟ್ಟ.ಹನಿಯ ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ,ಅವಳಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ಹಾಕಿದ.ಆಹಾರವನ್ನು ಬಿಡಿಸಿ ಬಾಯಿಗೆ ಹಾಕಿದ.ತಂದೆಯ ಪ್ರೀತಿಯನ್ನು ನೋಡಿ ಹನಿಯ ಮನಸ್ಸು ತುಂಬಿ ಬಂತು.ನನಗಾಗಿ ಅಪ್ಪ,ಅಮ್ಮನಲ್ಲಿ ಜಗಳವಾಡಿದ,ಪ್ರೀತಿಯ ಗೆಳತಿಯಿಂದ ದೂರವಾದ. ನಾನು ಬೆಳೆದು ದೊಡ್ಡವಳಾದ ಮೇಲೆ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಬೇಕು- ಎಂದು ಹನಿಯ ಪುಟ್ಟ ಮನಸ್ಸು ನಿರ್ಧರಿಸಿತು.ಹನಿ ಅಪ್ಪ ಮಂಜನ ರೆಕ್ಕೆಯಡಿಯಲ್ಲಿ ಬೆಚ್ಚನೆ ಮಲಗಿದಳು.ಮಂಜನೂ ಯೋಚಿಸಿದ ಇನ್ನು ನಾನು ಬೇರೆ ಯಾವುದರ ಕಡೆಗೂ ಗಮನ ಹರಿಸದೆ ಹನಿಯನ್ನು ಚಂದಕ್ಕೆ ಬೆಳೆಸಬೇಕು, ಇನ್ನು ಮುಂದೆ ಅವಳು ಕೊರಗದಂತೆ ನೋಡಬೇಕು.ಅವಳು ಕಳೆದುಕೊಂಡ ಎಲ್ಲಾ ಪ್ರೀತಿಯನ್ನು ನಾನು ಕೊಡಬೇಕು.ಪ್ರೀತಿಯ ಎರಡು ಮನಸ್ಸುಗಳು ಒಂದೇ ರೀತಿಯಲ್ಲಿ ಯೋಚಿಸಿದವು,ಆ ಆಲೋಚನೆಯಲ್ಲಿ ಎಷ್ಟೊಂದು ಸುಖವಿತ್ತು.ಹನಿ ,ಅಮ್ಮ ಮತ್ತು ಸೋದರ ಸೋದರಿಯರ ನಿರ್ಲಕ್ಷ್ಯ ವನ್ಮು ಮರೆತು ಮಂಜನ ಮಡಿಲಲ್ಲಿ ಸುಖವಾಗಿ ಜೀವಿಸಿದಳು.ಅಮ್ಮ ಎಂಬ ಭೂಮಿಯಿಂದ ತಿರಸ್ಕರಿಸಲ್ಪಟ್ಟ ಹನಿಗೆ ಅಪ್ಪ ಎಂಬ ಪುಟ್ಟ ಆಕಾಶ ಆಸರೆಯಾಯಿತು.ತನ್ನ ಆರು ಮಕ್ಕಳನ್ನು ಜೋಕೆಯ ಕಣ್ಣುಗಳಿಂದ ರಕ್ಷಿಸುತ್ತಿರುವ ಅಮ್ಮ ಸುಬ್ಬಿ ತನ್ನನ್ನು ದೂರ ಮಾಡಿದ್ದಾದರೂ ಏಕೆ ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಹನಿಯ ಮನಸ್ಸಿನಲ್ಲಿ ಉಳಿದು ಹೋಯಿತು.
ಉಷಾ.ಎಂ.
(ಪ್ರೀತಿಯ ಮಕ್ಕಳೇ, ನಾನು ನೋಡಿದ ಒಂದು ಘಟನೆಯನ್ನು ಕತೆಯನ್ನಾಗಿ ಬರೆದಿದ್ದೇನೆ.ಇದನ್ನು ಓದಿ ..ಸುಬ್ಬಿ ಮಗಳು ಹನಿಯನ್ನು ಏಕೆ ದೂರ ಮಾಡಿದ್ದು ..ಎಂದು ನಿಮ್ಮ ಕಲ್ಪನೆಯನ್ನು ಬರೆದು ಕಳಿಸಿರಿ.ನನ್ನ ನಂಬರ್ 9449822647)
*ಮಕ್ಕಳ ಜೋಳಿಗೆಯಲ್ಲಿ ರಾಜ್ಯಮಟ್ಟದ ಚಿತ್ರ ಸ್ಪರ್ಧೆ - ಮಕ್ಕಳ ಕಲರವ - https://www.makkalajolige.com/2022/09/makkalakalarava.html?m=1*
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 👇👇👇👇
*https://www.makkalajolige.com/2022/09/makkalakalarava.html?m=1**
ನವೆಂಬರ್ ತಿಂಗಳಲ್ಲಿ ಮಕ್ಕಳ ಜೋಳಿಗೆಗೆ ಒಂದು ವರ್ಷದ ಸಂಭ್ರಮ
ಈ ಸಂಭ್ರಮ ಮಕ್ಕಳಿಗಾಗಿ ಮೀಸಲು
ಎಳೆಯ ಬೆಳೆಯುವ ಮಕ್ಕಳ ಪ್ರತಿಭೆಗಾಗಿ ಜೋಳಿಗೆ ಒಂದು ಸೂಕ್ತ ವೇದಿಕೆ.
ಮಕ್ಕಳಿಗಾಗಿ ಮಕ್ಕಳಿಂದ ಮಕ್ಕಳಿಗೋಸ್ಕರ ಜೋಳಿಗೆಯಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ *ಮಕ್ಕಳ ಕಲರವ*
ಮಕ್ಕಳ ಜೋಳಿಗೆ ವಾಟ್ಸಪ್ ಗ್ರೂಫ್ ಸೇರಲು ಇಲ್ಲಿ ಕ್ಲಿಕ್ ಮಾಡಿ👇👇👇👇👇👇
*https://chat.whatsapp.com/JMsjilB1PZm7HOkupcsH4Q*
ನೀವು ಬಿಡಿಸಿದ ಚಿತ್ರಗಳನ್ನು ಅಂಚೆ ಮೂಲಕ ಕೆಳಗಿನ ವಿಳಾಸಕ್ಕೆ ಕಳುಹಿಸಿ ಕೊಡಿ👇👇👇👇👇👇
ಬಿ.ಎಂ.ರಫೀಕ್ ತುಂಬೆ
ಚಿತ್ರ ಕಲಾ ಶಿಕ್ಷಕರು
ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಢ ಶಾಲೆ ಕೋಟೆಪುರ
ಉಳ್ಳಾಲ 575020
ದಕ್ಷಿಣ ಕನ್ನಡ
@9008959566