ಸ್ವಾತಂತ್ರ್ಯದ ಅಮೃತ ಮಹೋತ್ಸವ ನಮಗೆಲ್ಲಾ ಪವಿತ್ರ ದಿನ - ಜಯಲಕ್ಷ್ಮೀ ಜಿ ಕುಂಪಲ
Sunday, August 14, 2022
ಐದು ಬೆರಳು ಸೇರಿ ಒಂದು ಮುಷ್ಟಿಯು ...
ಹಲವು ಮಂದಿ ಸೇರಿ ಈ ಸಮಷ್ಟಿಯು...
ಬೇರೆ ಬೇರೆ ಒಕ್ಕಲು ಒಂದೇ ತಾಯ ಮಕ್ಕಳು ...
ಕೂಡಿ ಹಾಡಿದಾಗ ಗೆಲುವುಗೀತೆಗೆ ಭರತ ಮಾತೆಗೆ....
ತಾಯಿ ಭಾರತಾಂಬೆಯು ಬ್ರಿಟಿಷರ ದಬ್ಬಾಳಿಕೆಯ ಆಳ್ವಿಕೆಯಿಂದ ಮುಕ್ತಿಗೊಂಡು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮವನ್ನು ಆಚರಿಸುತ್ತಿರುವ ಪರ್ವಕಾಲ... ಎಲ್ಲೆಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿರುವ ಪುಣ್ಯಕಾಲ.. ಎಲ್ಲರ ಮನಮನಗಳಲ್ಲಿ ರಾಷ್ಟ್ರಭಕ್ತಿಯ ಕಿಚ್ಚು ಅರಳಿಸಿರುವ ಈ ಮಹತ್ವದ ದಿನವೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂಭ್ರಮ..
"ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡುತ್ತೇನೆ" ಎಂದು ಗುಡುಗಿದ ಸುಭಾಷ್ ಚಂದ್ರ ಬೋಸ್, "ಸ್ವಾತಂತ್ರ್ಯವೇ ನನ್ನ ಜನ್ಮ ಸಿದ್ಧ ಹಕ್ಕು" ಎಂದು ಸಾರಿದ ಬಾಲ ಗಂಗಾಧರ ತಿಲಕ್, "ಮಾಡು ಇಲ್ಲವೇ ಮಡಿ " ಎಂದು ಬಡಿದೆಬ್ಬಿಸಿದ ಮಹಾತ್ಮ ಗಾಂಧಿ , " ಇಂಕಿಲಾಬ್ ಜಿಂದಾಬಾದ್" ಎಂದು ಬಡಿದೆಬ್ಬಿಸಿದ ವೀರ ಭಗತ್ ಸಿಂಗ್.. ಹೀಗೆ ಹಲವಾರು ರಾಷ್ಟ್ರ ನಾಯಕರ ತ್ಯಾಗ ,ಬಲಿದಾನ ,ಸತ್ಯಾಗ್ರಹ, ಹೋರಾಟದ ಫಲವಾಗಿ 1947 ಆಗಸ್ಟ್ 15 ರಂದು ಭಾರತ ಬ್ರಿಟಿಷರ ಕಪಿಮುಷ್ಠಿಯಿಂದ ಸ್ವತಂತ್ರಗೊಂಡಿತು..
ಬ್ರಿಟಿಷರ ದಾಸ್ಯ ಶೃoಖಲೆಯಿಂದ ಮುಕ್ತಿಗೊಂಡ ಈ ದಿನವನ್ನು ಇಡೀ ದೇಶಾದ್ಯಂತ ಜಾತಿ ,ಮತ ಧರ್ಮ ಭೇದವಿಲ್ಲದೆ ಶ್ರದ್ಧೆಯಿಂದ ದೇಶಭಕ್ತಿಯಿಂದ ಆಚರಿಸುತ್ತಾರೆ. ಧ್ವಜಾರೋಹಣ, ಪ್ರಭಾತಪೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಗೌರವವನ್ನು ನೀಡುತ್ತಾರೆ.. ಸ್ವಾತಂತ್ರ್ಯ ದಿನಾಚರಣೆಯು ಪ್ರತಿಯೊಬ್ಬ ಭಾರತೀಯನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನದ ವೀರ ರಾಷ್ಟ್ರಭಕ್ತರಿಗೆ ನಮನ ಸಲ್ಲಿಸುವ ಸುದಿನವಾಗಿದೆ..
ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಅಂದಿನ ಕರ್ತವ್ಯವನ್ನು ಇಷ್ಟೆಯಿಂದ ಮಾಡಿದಂತೆ ಇಂದಿನ ಯುವ ಜನತೆ ತಾವು ಗಳಿಸಿದಂತ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸಿ, ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು.. ನಮ್ಮ ಪೂರ್ವಜರ ತ್ಯಾಗ ಬಲಿದಾನಗಳ ಪ್ರತೀಕವಾದ ಸ್ವಾತಂತ್ರ್ಯವನ್ನು ಸ್ವೇಚ್ಛೆ ಯಾಗಿ ಪರಿಗಣಿಸದೆ ಅದನ್ನು ತಮ್ಮ ಬದುಕಿನ ಪ್ರಗತಿಯ ರಹದಾರಿ ಎಂದು ತಿಳಿದು ದೇಶದ ಪ್ರಗತಿಗೆ ಶ್ರಮಿಸಬೇಕು..
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಪರ್ವದಂದು ಪ್ರತಿಯೊಬ್ಬ ದೇಶಭಕ್ತರು ತಮ್ಮ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ರಾಷ್ಟ್ರಕ್ಕೆ ಹಾಗೂ ರಾಷ್ಟ್ರಧ್ವಜಕ್ಕೆ ಗೌರವನ್ನು ಸಲ್ಲಿಸಬೇಕು.. ದೇಶದ ಸ್ವಾತಂತ್ರ್ಯಕ್ಕೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ರೀತಿಯ ಧಕ್ಕೆ ಬಾರದಂತೆ ಗೌರವಯುತವಾಗಿ ನಡೆಯಬೇಕೆಂಬುದೇ ನಮ್ಮೆಲ್ಲರ ಆಶಯವಾಗಿದೆ...
*ಜೈ ಹಿಂದ್..*
ಜಯಲಕ್ಷ್ಮಿ ಜಿ ಕುಂಪಲ