ಪರೀಕ್ಷೆ ಯ ಗೆಲುವಿಗೊಂದು ದಾರಿ - ಬಿ ಮೊಹಮ್ಮದ್ ತುಂಬೆಯವರ ಬರಹ
Friday, March 25, 2022
ಪರೀಕ್ಷೆಯ ಯಶಸ್ಸಿನ ಮೆಟ್ಟಿಲುಗಳು...
ಪರೀಕ್ಷೆಯೆಂಬುದು ಪ್ರತಿಯೊಬ್ಬರ ಜೀವನದಲ್ಲಿ, ಪ್ರತಿಹಂತದಲ್ಲೂ ಕಾಣ ಬರುವಂತಹ ಸಂದರ್ಭವಾಗಿದೆ.. ಹಾಗೆಯೇ ವಿದ್ಯಾರ್ಥಿಯ ಶೈಕ್ಷಣಿಕ ಜೀವನದಲ್ಲಿ ಪರೀಕ್ಷೆಯೆಂಬುದು ಮುಖ್ಯವಾದ ಮೈಲಿಗಲ್ಲಾಗಿದೆ. ಪರೀಕ್ಷೆಯು ವಿದ್ಯಾರ್ಥಿಯ ಕಲಿಕಾ ಮಟ್ಟವನ್ನು ಅಳೆದು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಅಣಿಗೊಳಿಸುವ ಕ್ರಮವಾಗಿದೆ.. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಕಲಿತಂತಹ ವಿಷಯಗಳನ್ನು ಒರೆ ಹಚ್ಚಲು ಪರೀಕ್ಷೆ ಒಂದು ಸಾಧನವಾಗಿದೆ.. ಪ್ರತಿಯೊಬ್ಬ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ..
ಪರೀಕ್ಷೆಯ ಮುನ್ನ ದಿನದ ತಯಾರಿ ಹೀಗಿದ್ದರೆ ಚೆನ್ನ......
ಪರೀಕ್ಷೆಯ ಹಿಂದಿನ ದಿನವೂ ಚೆನ್ನಾಗಿ ಪುನರಾವರ್ತನೆ ಮಾಡಿ. ಪರೀಕ್ಷೆಯ ಪರಿಕರಗಳನ್ನು ರಾತ್ರಿಯೆ ಜೋಡಿಸಿಡಿ.
ಪರೀಕ್ಷೆಯ ಹಿಂದಿನ ದಿನ ರಾತ್ರಿ ಮಲಗುವಾಗ 5 ನಿಮಿಷಗಳ ಕಾಲ ಮರುದಿನದ ಪರೀಕ್ಷೆಯಲ್ಲಿ ಬರೆಯುವ ವಿಷಯಗಳು ತುಂಬಾ ಸುಲಭವಾಗಿ ಇರುವಂತೆ, ನೀವು ಚೆನ್ನಾಗಿ ಬರೆಯುವಂತೆಯು, ಮತ್ತು ನಿಮಗೆ ಉತ್ತಮ ಅಂಕಗಳು ಬಂದು ಎಲ್ಲರು ನಿಮ್ಮನ್ನು ಪ್ರಶಂಶಿಸುತ್ತಿರುವಂತೆ ಕಲ್ಪಿಸಿ ಕೊಳ್ಳಿ.
ಇದು ನಿಮ್ಮಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಮೂಡಿಸುತ್ತದೆ.
ಪರೀಕ್ಷೆ ಪ್ರಾರಂಭವಾಗಲು ಇನ್ನು 1 ಗಂಟೆ ಇದೆ ಎನ್ನುವಾಗ ಲೇ, ನೀವು ಓದುವುದನ್ನು ನಿಲ್ಲಿಸಿ ಮೌನದಿಂದಿರಿ , ಮನಸು ಪ್ರಶಾಂತ ವಾಗುತ್ತದೆ.
ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಕೆಲವೊಂದು ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಅಗತ್ಯವಾಗಿದೆ...
ಪ್ರಶ್ನೆಪತ್ರಿಕೆಯನ್ನು ಸಂತೋಷ ಮತ್ತು ನಗುಮುಖದಿಂದ ಸ್ವೀಕರಿಸಿ...
ಪರೀಕ್ಷಾ ಕೊಠಡಿಗೆ ಹೋದಾಗ 5--10.. ನಿಮಿಷಕಾಲ ಧ್ಯಾನ ಮಾಡಿ. ನಿಮ್ಮ ಮೆದುಳು state of monkey mind ನಿಂದ State of steady and focused mind ಗೆ ಬದಲಾಗುತ್ತದೆ.
ಪರೀಕ್ಷೆಯಲ್ಲಿ ಸಾಧ್ಯವಾದಷ್ಟು ಶಾಂತವಾದ ಮತ್ತು ಉಲ್ಲಾಸದ ಮನಸ್ಥಿತಿ ಇರಲಿ. ಏಕೆಂದರೆ ನಿಮ್ಮಲ್ಲಿ ಆಗ ಅಗತ್ಯವಾದ ನ್ಯೂರೋ ಟ್ರಾನ್ಸ್ಮಿಟರ್ ಗಳ ಉತ್ಪತ್ತಿಯಾಗಿ ಕಲಿತ ಅಂಶಗಳನ್ನು ಚೆನ್ನಾಗಿ ನೆನಪಿಸಿಕೊಳ್ಳಲು ಮೆದುಳಿಗೆ ಸಹಾಯಮಾಡುತ್ತದೆ.
ಪ್ರತಿ 30 ನಿಮಿಷಗಳಿಗೊಮ್ಮೆ ಮೂವತ್ತು ಸೆಕೆಂಡುಗಳ ದೀರ್ಘ ಉಸಿರಾಟ ಮಾಡಿ, ಇದರಿಂದ ಮೆದುಳಿಗೆ ಹೆಚ್ಚು ಆಮ್ಲಜನಕ ಪೂರೈಕೆಯಾಗಿ ಪರೀಕ್ಷೆ ಮುಗಿಯುವವರೆಗೂ ಮೆದುಳು ಕ್ರಿಯಾಶೀಲವಾಗಿರುತ್ತದೆ.
ಬರವಣಿಗೆ ಅಂದವಾಗಿರಲಿ, ಮೊದಲು ಚೆನ್ನಾಗಿ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರ ಬರೆಯಿರಿ, ನಂತರ ಸ್ವಲ್ಪ ಸ್ವಲ್ಪ ಗೊತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿರಿ, ನಂತರ ಸ್ವಲ್ಪವೂ ಉತ್ತರ ತಿಳಿಯದಿರುವ ಪ್ರಶ್ನೆಗಳನ್ನು ಉತ್ತರಿಸಿರಿ.
ಉತ್ತರ ಪತ್ರಿಕೆಯನ್ನು ಹಿಂದಿರುಗಿಸುವ ಮೊದಲು ಬರೆದಿರುವ ಉತ್ತರಗಳನ್ನು ಒಮ್ಮೆ ಪರಿಶೀಲಿಸಿ, ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ರುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಉತ್ತರದಲ್ಲಿ ಕೀ ಪಾಯಿಂಟ್ ಗೆ ಅಂಡರ್ ಲೈನ್ ಮಾಡಿ.
ಪರೀಕ್ಷಾ ಕೊಠಡಿಯಿಂದ ಹೊರಗೆ ಬರುವ ಮೊದಲು ತಾವುಗಳು ಕೊಂಡು ಹೋದ ಪರೀಕ್ಷಾ ಪರಿಕರಗಳನ್ನು ವಾಪಾಸು ತನ್ನಿ.
ಪರೀಕ್ಷಾ ಕೊಠಡಿಯಿಂದ ಹೊರಗಡೆ ಬಂದ ನಂತರ ಈಗಾಗಲೇ ಬರೆದಿರುವ ವಿಷಯಗಳ ಬಗ್ಗೆ,ಯಾವುದನ್ನು ಬರೆದೆ, ಹೇಗೆ ಬರೆದೆ, ಎಷ್ಟು ಬರೆದೆ, ಎಂಬುದನ್ನು ಯಾರೊಂದಿಗೂ ಚರ್ಚಿಸದೆ ನೇರವಾಗಿ ಮನೆಗೆ ಬಂದು ವಿಶ್ರಾಂತಿ ಪಡೆದು, ಮುಂದೆ ಬರೆಯಬೇಕಾದ ಪರೀಕ್ಷಾ ವಿಷಯಗಳ ಬಗ್ಗೆ ಗಮನಹರಿಸಿ.
ಪ್ರೀತಿಯ ವಿದ್ಯಾರ್ಥಿಗಳೇ, ಪರೀಕ್ಷೆ ಒಂದು ಹಬ್ಬ, ಇದು ನಿಮಗೆ ನೆನಪಿರಲಿ.
ಎಲ್ಲರಿಗೂ ಶುಭವಾಗಲಿ...
ಬಿ ಮೊಹಮ್ಮದ್ ತುಂಬೆ
ನಿವೃತ್ತ ಶಿಕ್ಷಕರು ಹಾಗೂ ತರಬೇತಿದಾರರು