
ರಾಷ್ಟ್ರೀಯ ವಿಜ್ಞಾನ ದಿನ - ಜಯಲಕ್ಷ್ಮಿ ಜಿ ಕುಂಪಲರವರ ವಿಶೇಷ ಲೇಖನ
Sunday, February 27, 2022
ವಿಜ್ಞಾನ ಎಂದರೆ.... ಸ್ಪಷ್ಟತೆ, ಶಿಸ್ತು, ವಿಶ್ವಾಸಾರ್ಹತೆ ,ಪ್ರೇರಣೆ ,ಸತ್ಯ, ನಿಖರತೆ,ವೈಜ್ಞಾನಿಕ ಮನೋಭಾವನೆ ಮತ್ತು ವ್ಯವಸ್ಥಿತ ಅಧ್ಯಯನಗಳ ಸಮ್ಮಿಲನ ವಾಗಿದೆ...
ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ಮೂಡಿಸುವುದು,ಜನಸಾಮಾನ್ಯರ ದಿನನಿತ್ಯದ ಜೀವನದಲ್ಲಿ ವಿಜ್ಞಾನದ ಮಹತ್ವವನ್ನು ತಿಳಿಯಪಡಿಸುವುದು ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಪ್ರತಿಯೊಬ್ಬರಲ್ಲಿ ಬೆಳೆಸುವುದಕ್ಕೋಸ್ಕರ ಪ್ರತಿವರ್ಷ ಫೆಬ್ರವರಿ 28ರಂದು " ರಾಷ್ಟ್ರೀಯ ವಿಜ್ಞಾನ ದಿನಾಚರಣೆ" ಯನ್ನು ಆಚರಿಸಲಾಗುತ್ತದೆ...
ಫೆಬ್ರವರಿ 28 ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ದಿನವಾಗಿದೆ.. ಏಷ್ಯಾ ಖಂಡದಲ್ಲಿ ಮತ್ತೆ ಮೊದಲ ಬಾರಿಗೆ ವಿಜ್ಞಾನ ವಿಭಾಗದಿಂದ ನೊಬೆಲ್ ಪ್ರಶಸ್ತಿ ಪಡೆದ ಹೆಮ್ಮೆಯ ಭಾರತೀಯರಾದ ಸರ್ ಸಿ.ವಿ. ರಾಮನ್ ರವರು 1928 ಫೆಬ್ರವರಿ 28 ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬೆಳಕಿನ ಚದುರುವಿಕೆಯ ಪರಿಣಾಮಗಳನ್ನು ವಿವರಿಸಿದರು ..ಮುಂದೆ ಈ ಸಂಶೋಧನೆ ರಾಮನ್ ಪರಿಣಾಮ( Raman effect) ಎಂಬುದಾಗಿ ಜಗತ್ತಿನಾದ್ಯಂತ ಪ್ರಸಿದ್ಧವಾಯಿತು . ಈ ದಿನವನ್ನು ಪ್ರತಿ ವರ್ಷ "ರಾಷ್ಟ್ರೀಯ ವಿಜ್ಞಾನ ದಿನ" ವನ್ನಾಗಿ ಆಚರಿಸುವುದರ ಮೂಲಕ ಭಾರತೀಯ ಹೆಮ್ಮೆಯ ವಿಜ್ಞಾನಿ ಸರ್ ಸಿ .ವಿ. ರಾಮನ್ ಅವರಿಗೆ ಗೌರವವನ್ನು ಸಲ್ಲಿಸಲಾಗುತ್ತದೆ...
ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು.
ವಾತಾವರಣದಲ್ಲಿಯ ಧೂಳಿನ ಕಣಗಳು ಬೆಳಕನ್ನು ಭಾಗಶಃ ಚದುರಿಸುವವು. ಹೀಗೆ ಬೆಳಕು ಚದುರಿದಾಗ, ಅದರ ಎಲ್ಲ ಬಣ್ಣಗಳೂ ಚದುರುವುವು. ಹೆಚ್ಚು ಚದುರದ ಕೆಂಪುಬೆಳಕು ದಿಗಂತದ ಸಮೀಪ ಸೂರ್ಯಕಾಣುವ ಪ್ರದೇಶದಲ್ಲಿ ಪ್ರಜ್ವಲಿಸುವುದು. ಉಳಿದದ್ದು ಆಕಾಶಕ್ಕೆ ನೀಲಿ ಬಣ್ಣವನ್ನು ನೀಡುವುದು. ಬೆಳಕು ಚದುರುವಾಗ ಶಕ್ತಿಯ ಸ್ವೀಕಾರ ಅಥವಾ ದಾನ ಬೆಳಕಿನ ತರಂಗಾಂತರವನ್ನು ನಿರ್ದಿಷ್ಟವಾಗಿ ಬದಲಾಯಿಸುವ ಸಾಧ್ಯತೆ ಲಕ್ಷದಲ್ಲೊಂದು ಮಾತ್ರ. ಎಂದರೆ ಒಂದು ಲಕ್ಷ ಬೆಳಕಿನ ಕಣಗಳು ಚದುರಿದಾಗ ಒಂದು ಮಾತ್ರ ರಾಮನ್ ಪರಿಣಾಮಕ್ಕೆ ಒಳಗಾಗುವುದು, ಎನ್ನುವ ವಿಚಾರ ಬೆಳಕಿಗೆ ಬಂತು. ಇದನ್ನೇ “ರಾಮನ್ ಪರಿಣಾಮ” ಎಂದು ಕರೆಯಲಾಗುತ್ತದೆ..
ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಅನ್ವೇಷಣೆಯಾಗಿದೆ...
ಈ ಸಾಧನೆಗಾಗಿ ಅವರಿಗೆ1930 ನೇ ಇಸವಿಯಲ್ಲಿ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊಟ್ಟಮೊದಲ ನೊಬೆಲ್ ಪುರಸ್ಕಾರವೂ ಹೌದು.....
ಸರ್ ಸಿ.ವಿ. ರಾಮನ್ ರವರು ತಮಿಳುನಾಡಿನ ತಿರುಚಿನಾಪಳ್ಳಿಯ ತಿರುವನೈಕಾವಲ್ ನಲ್ಲಿ 1888 ನವೆಂಬರ್ 7 ರಂದು ಚಂದ್ರಶೇಖರ್ ಮತ್ತು ಪಾರ್ವತಿ ಅಮ್ಮನವರ ಮಗನಾಗಿ ಜನಿಸಿದರು. ಅವರ ತಂದೆ ಚಂದ್ರಶೇಖರ್ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಮೇಧಾವಿಯಾಗಿದ್ದ ರಾಮನ್ ವಿದ್ಯಾಭ್ಯಾಸ ಹಾಗೂ ವೃತ್ತಿಜೀವನದಲ್ಲಿ ಮಾಡಿದ ಸಾಧನೆ ಅಪಾರವಾಗಿತ್ತು.ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ..
ಫೆಲೋ ಆಫ್ ರಾಯಲ್ ಸೊಸೈಟಿ ಸದಸ್ಯತ್ವ , ನೈಟ್ ಹುಡ್ ಪ್ರಶಸ್ತಿ ,
ನೋಬೆಲ್ ಪ್ರಶಸ್ತಿ ,ಮೈಸೂರು ಮಹಾರಾಜರಿಂದ,
'ರಾಜ ಸಭಾ ಭೂಷಣ ಗೌರವ' , ಭಾರತ ರತ್ನ ಪ್ರಶಸ್ತಿ
ಲೆನಿನ್ ಶಾಂತಿ ಪ್ರಶಸ್ತಿ , ಇವರಿಗೆ ಲಭಿಸಿದೆ..
ವಿಶ್ವ ಕಂಡ ಅದ್ಭುತ ವಿಜ್ಞಾನಿ ಭಾರತದ ಹೆಮ್ಮೆಯ ಸರ್ ಸಿ.ವಿ.ರಾಮನ್ ರವರು ನವೆಂಬರ್ 21 , 1970ರಲ್ಲಿ, ರವರು, ದೇಮಹಳ್ಳಿಯಲ್ಲಿ ನಿಧನರಾದರು...
ಸಂಶೋಧನೆಗಳ ಸಫಲತೆಗೆ ಕಾರಣ ಅತ್ಯಾಧುನಿಕ ಉಪಕರಣಗಳಾಗಬೇಕಿಲ್ಲ. ಆದರೆ, ಸ್ವತಂತ್ರವಾದ ಆಲೋಚನೆ ಮತ್ತು ನಿರಂತರ ದುಡಿಮೆ” ಎಂಬ ಮಾತಿನಂತೆ
ಇವರು ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಸಂಶೋಧನೆ, ಸಾಧನೆಗಳನ್ನು ಇಂದಿನ ಜನಾಂಗಕ್ಕೆ ತಿಳಿಸುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ , ಜನರಲ್ಲಿ ವೈಜ್ಞಾನಿಕ ಮನೋಭಾವನೆ, ಸಂಶೋಧನ ಗುಣಗಳು ಬೆಳೆಯಲಿ ಎಂಬುದೇ ನಮ್ಮ ಆಶಯ ವಾಗಿದೆ...
*ಅಜ್ಞಾನ ಅಳಿದು, ಸುಜ್ಞಾನ ಮೊಳೆತು, ವಿಜ್ಞಾನ ಬೆಳೆಯಲಿ*...
ಜಯಲಕ್ಷ್ಮಿ ಜಿ ಕುಂಪಲ