ಬದಲಾದ ಜೀವನ ಶೈಲಿ... ಸಂಬಂಧಗಳು ನೂರು ಮೈಲಿ. - ಜಯಲಕ್ಷ್ಮಿ ಜಿ ಕುಂಪಲ
Sunday, February 6, 2022
🌹 *ಬದಲಾದ ಜೀವನ ಶೈಲಿ .....ಸಂಬಂಧಗಳು ನೂರು ಮೈಲಿ.....*🌹
ಆಧುನಿಕ ತಂತ್ರಜ್ಞಾನ ,ವೈಜ್ಞಾನಿಕ ಮನೋಭಾವನೆ ,ನವೀನ ಸಂಶೋಧನೆಗಳು, ಹೆಚ್ಚಾದಂತೆ ಮನುಷ್ಯನ ಜೀವನಶೈಲಿಯಲ್ಲಿ ಕೂಡ ಬದಲಾವಣೆಗಳು ಕಂಡುಬಂದಿದೆ.
ಹಿಂದಿನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಇದ್ದುಕೊಂಡು ಕುಣಿಯುತ್ತಾ ,ನಲಿಯುತ್ತಾ ಸಹಕಾರ ಜೀವನವನ್ನು ಮಾಡುತ್ತಿದ್ದಂತ ಮಾನವ ಈಗ ವಿಭಕ್ತ ಕುಟುಂಬಕ್ಕೆ ಹೆಚ್ಚು ಮನಸೋತಿದ್ದಾನೆ. ತಾನು, ತನ್ನದು ಎನ್ನುವ ಸಂಕುಚಿತ ಎಲ್ಲರಲ್ಲೂ ಮನೋಭಾವನೆ ಹೆಚ್ಚಾಗಿದೆ.
ಮುಂಜಾನೆ ಬೇಗನೆ ಎದ್ದು ಹೊಲಗದ್ದೆಗಳಲ್ಲಿ ಕೆಲಸ ಮಾಡಿ ಎಲ್ಲರ ಜೊತೆ ಸೇರಿ ಪ್ರೀತಿಯಿಂದ ಉಪಹಾರ ಮಾಡುತ್ತಿದ್ದ ಕಾಲವಿತ್ತು. ಆದರೆ ಈಗಿನ ನಮ್ಮ ಧಾವಂತದ ಜೀವನ ಶೈಲಿಯಲ್ಲಿ ಎಲ್ಲರೂ ಜೊತೆಯಾಗಿ ಕುಳಿತುಕೊಂಡು ಊಟ ಮಾಡುವುದು ಬಿಡಿ, ಮಾತನಾಡುವಷ್ಟು ಪುರುಸೊತ್ತು ಇಲ್ಲದಂತಾಗಿದೆ.ಈಗ ಮೊಬೈಲ್ ಬಂದು ಎಲ್ಲದಕ್ಕೂ ಬ್ರೇಕ್ ಹಾಕಿದಂತಾಗಿದೆ...ಕೈಯ್ಯಲ್ಲಿ ಮೊಬೈಲ್ ಇದ್ದರೆ ಬಳಿಯಲ್ಲಿ ಹಾವು ಬಂದು ಬುಸುಗುಟ್ಟಿದರೂ ಕೇಳದ ಕಿವುಡರಾಗಿದ್ದಾರೆ ಈಗಿನ ಜನ...
ಪ್ರತಿನಿತ್ಯ ಬೆಳಗೆದ್ದು ರಾಗಿ ಬೀಸಿ ಹಿಟ್ಟು ಮಾಡಿ ಅದರಿಂದ ರೊಟ್ಟಿ ಮಾಡಿ ತಿನ್ನುತ್ತಿದ್ದರು. ಈಗ ಯಾವಾಗಲೋ ಮಾಡಿದ, ಫ್ರಿಜ್ಜಿನಲ್ಲಿ ಟ್ಟು ನಾಲ್ಕು ದಿನದ ನಂತರ ತಿನ್ನುವಂತ ಕಾಲವಾಗಿದೆ . ಯಾವುದೇ ಕೆಲಸ ಮಾಡಬೇಕಾದರೂ ಯಂತ್ರಗಳ ಸಹಾಯ ಅನಿವಾರ್ಯವಾಗುವ ಪರಿಸ್ಥಿತಿಯಾಗಿದೆ.
ತಾವೇ ನೆಟ್ಟು ಬೆಳೆಸಿದ ಗದ್ದೆಯಲ್ಲಿ ಸಿಗುವ ತಾಜಾ ಆಹಾರ ತರಕಾರಿಗಳು ಹಣ್ಣುಹಂಪಲುಗಳನ್ನು ಹಿಂದಿನ ಕಾಲದಲ್ಲಿ ತಿನ್ನುತ್ತಿದ್ದರು, ಆದರೆ ಈಗ ಗದ್ದೆಗಳೆಲ್ಲ ನಾಶವಾಗಿ ಅಲ್ಲೆಲ್ಲ ಕಾಂಕ್ರೀಟ್ ಬಿಲ್ಡಿಂಗ್ ಗಳು ತಲೆಯೆತ್ತಿ ನಿಂತಿವೆ. ಇನ್ನು ತಾಜಾ ಆಹಾರ ಎಲ್ಲಿ ಸಿಗಬೇಕು.
ಹಿಂದೆ ಮನೆಗಳಲ್ಲಿ ಅಜ್ಜ-ಅಜ್ಜಿ ಎಲ್ಲರೂ ಇದ್ದು ಮಕ್ಕಳಿಗೆಪುರಾಣ ಕಥೆಗಳು ,ನೀತಿಕಥೆಗಳನ್ನು ಹೇಳಿ ಮಕ್ಕಳನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸುತಿದ್ದರು . ಬದಲಾದ ಕಾಲಘಟ್ಟದಲ್ಲಿ ಅಜ್ಜ-ಅಜ್ಜಿಯರು ಅನಾಥಾಶ್ರಮದಲ್ಲಿ ಇರುವಂತಹ ಪರಿಸ್ಥಿತಿಯಾಗಿದೆ... ಮೊಬೈಲ್ ನಿಂದಾಗಿ ಜನರ ನಡುವಿನ ಸಂಬಂಧಗಳು ವಾಟ್ಸಾಪ್ ಮೆಸೇಜ್ ಗಳಿಗೆ ಸೀಮಿತವಾಗಿರುವ ಪರಿಸ್ಥಿತಿ ಬಂದಿದೆ.
ಆಧುನಿಕ ಜೀವನ ಶೈಲಿಯಿಂದಾಗಿ ಮನುಷ್ಯನಿಗೆ ಮಾನಸಿಕವಾಗಿಯೂ ,ದೈಹಿಕವಾಗಿಯೂ ಹಲವಾರು ಒತ್ತಡಗಳು, ಕಾಯಿಲೆಗಳು ಹೆಚ್ಚಾಗಿದೆ...
ಆಧುನಿಕತೆ ಹೆಚ್ಚಾದಂತೆ ಸಂಬಂಧಗಳು, ಭಾವನಾತ್ಮಕ ಪರಿಸರ ಕಡಿಮೆಯಾಗುತ್ತಾ ಬಂದಿದೆ... ಬದಲಾದ ಜೀವನ ಶೈಲಿಯಿಂದ ಸಂಬಂಧಗಳು ನೂರು ಮೈಲಿ ದೂರವಾಗಿದೆ....ಕಾಲಕ್ಕೆ ಎಲ್ಲವನ್ನೂ ಬದಲಾಯಿಸುವ ಶಕ್ತಿ ಇದೆ...
ಕಾಲಾಯ ತಸ್ಮೈ ನಮಃ....🙏
✍️_ಜಯಲಕ್ಷ್ಮಿ ಜಿ, ಕುಂಪಲ
🌺🌺🌺🌺🌺🌺🌺🌺🌺🌺🌺🌺🌺🌺🌺