ಮಾತಿನ ಮಹತ್ವ - ಪ್ರತಿಮಾ ಹೆಬ್ಬಾರ್
Tuesday, January 4, 2022
ಮಾತಿನ ಮಹತ್ವ
ಮಾತು ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಿಪಡಿಸುವ ಪಂಚೇಂದ್ರಿಯಗಳ ಒಂದು ಅಂಗದ ಕ್ರಿಯೆ .ಕಣ್ಣು-ಕಿವಿ ಮೂಗು ನಾಲಗೆ ಚರ್ಮ ಈ ಇಂದ್ರಿಯಗಳಲ್ಲಿ ನಾಲಗೆ ಬಿಟ್ಟರೆ ಉಳಿದವುಗಳಿಗೆ ಒಂದೊಂದೇ ಕೆಲಸ. ನಾಲಿಗೆಗೆ ಆಹಾರದ ರಸಸ್ವಾದವನ್ನು ಅನುಭವಿಸುವ ಜೊತೆಗೆ ತನ್ನ ಭಾವನೆಗಳನ್ನು ಹೊರಹೊಮ್ಮಿಸುವ ಗುರುತರವಾದ ಕೆಲಸವೂ ಇದೆ. ಆದುದರಿಂದಲೇ ನಾಲಿಗೆಯನ್ನು ದೇವರು ಹಲ್ಲುಗಳ ಕೋಟೆಯೊಳಗೆ ಭದ್ರವಾಗಿ ಇಟ್ಟಿರುತ್ತಾನೆ. ನಾಲಿಗೆಯಿಂದ ಹೊರಟ ಮಾತು ಮುತ್ತಿನಂತಿರಬೇಕು. ಹದ್ದುಬಸ್ತಿನಲ್ಲಿ ಅದನ್ನು ಉಪಯೋಗಿಸಬೇಕು. ಅದಕ್ಕಾಗಿಯೇ ಸರ್ವಜ್ಞ ಈ ರೀತಿ ಮಾತನ್ನು ಬಣ್ಣಿಸಿದ್ದಾನೆ
ಮಾತಿಂದ ನಗೆ ನುಡಿಯು/
ಮಾತಿಂದ ಕೊಲೆ ಹಗೆಯು/
ಮಾತಿಂದ ಸಕಲ ಸಂಪದವು/
ಲೋಕಕ್ಕೆ ಮಾತೇ ಮಾಣಿಕ್ಯವು/
ಆತ್ಮೀಯವಾದ ನಿಷ್ಕಪಟ ಮನಸ್ಸಿನಿಂದ ಅರ್ಥಪೂರ್ಣವಾದ ಮಾತು ಲೋಕಕ್ಕೆ ಅತ್ಯುತ್ತಮವಾದ ಫಲವನ್ನು ನೀಡುತ್ತದೆ. ಸಕಲ ವಿಚಾರಗಳು ಸ್ಪಂದಿಸುವುದು ಮಾತಿನ ಮೂಲಕ .ಮಾತು ಮುತ್ತಿನಂತಿರಬೇಕು..
ದಾಸವರೇಣ್ಯರು ಇದನ್ನೆಲ್ಲ ಅರಿತೇ ಈ ರೀತಿ ಹಾಡಿದ್ದಾರೆ
ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ದೂಷಿಸುವುದಕ್ಕೆ ಚಾಚಿಕೊಂಡಿರುವ ನಾಲಿಗೆ.
ಇತರರನ್ನು ವಿನಾಕಾರಣ ದೂಷಿಸುತ್ತಾ ಅವಹೇಳನ ಮಾಡುತ್ತಾ ನೋವುಗಳಿಂದ ಕೂಡಿದ ಮಾತುಗಳನ್ನು ಆಡುವುದಕ್ಕೆ ನಾಲಗೆಯನ್ನು ಉಪಯೋಗಿಸಲೇಬಾರದು. ಸರ್ವಜ್ಞ ವಚನದ ಅರ್ಥವನ್ನು ತಿಳಿದುಕೊಳ್ಳೋಣ.
ಮಾತು ಬಂದಾಗ ತಾ ಸೋತು ಬರುವುದೇ ಲೇಸು .ಮಾತಿಂಗೆ ಮಾತು ಮಥನಿಸೆ ವಿಧಿ ಬಂದು ಆತುಕೊಂಡಿಹುದು. ಸರ್ವಜ್ಞ.
ಒಂದು ವಿಚಾರದಲ್ಲಿ ಚರ್ಚೆ ಉಂಟಾಗಿ ಮಾತಿಗೆ ಮಾತು ಬೆಳೆದು ಅದು ಗುಂಪುಗಾರಿಕೆ ಆಗುವ ಹಂತದವರೆಗೂ ತಲುಪಿ ಅಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣ ಉಂಟಾಗಿ ಕೊಲೆಯಲ್ಲಿಯೂ ಸಮಾಪ್ತಿಯಾಗಬಹುದು. ಅದನ್ನು ತಪ್ಪಿಸುವ ಒಂದೇ ಒಂದು ಉಪಾಯ ಸರ್ವಜ್ಞ ಹೇಳಿದ್ದಾನೆ ಮಾತು ಮಾತು ಬೆಳೆದು ಅದು ಎಲ್ಲೆಯನ್ನು ಮೀರುವ ಸಂಭವ ಉಂಟಾಗುವ ಮೊದಲೇ ಅಲ್ಲಿಂದ ಹೊರಬರುವುದು ಲೇಸು .ಚರ್ಚೆ ಮಾಡಲು ಅವನಿಂದ ಆಗಲಿಲ್ಲ ಎಂದು ಮೂದಲಿಸಿದರು ಪರವಾಗಿಲ್ಲ. ಅದು ಸೋಲೇ ಅಲ್ಲ .ಒಂದು ರೀತಿಯ ಗೆಲುವು ಎಂದೇ ತಿಳಿಯುವುದು ಜೀವನದಲ್ಲಿ ಬದುಕುವ ವರಯೋಗ ಸೂತ್ರ ವಾಗಿರುತ್ತದೆ. ಪರಸ್ಪರ ಸ್ನೇಹದಿಂದ ಬದುಕುವ ರೀತಿ ಗಾಗಿ. ದುಃಖ ಮನಸ್ಸಿನ ಆತಂಕ, ದುಗುಡ, ಖಿನ್ನತೆ, ಭಯ, ಒಂಟಿತನ ಗಳನ್ನು ಹೋಗಲಾಡಿಸುವುದರಲಿ ಮಾತು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವೈದ್ಯರಲ್ಲಿಗೆ ರೋಗಿ ಹೋದಾಗ ನುರಿತ ಅನುಭವಿ ವೈದ್ಯ ಮಾತಿನ ಮೂಲಕ ಸಾಂತ್ವನ ನೀಡಿ ವೈದ್ಯರು ಕೊಡುವ ಔಷಧಿಯಿಂದ ರೋಗಿಯ ಶರೀರ ಸ್ಪಂದಿಸಿ ಕಾಯಿಲೆ ಬೇಗನೆ ಗುಣವಾಗುತ್ತದೆ. ನುಡಿಯೊಂದು ಉದುರಿದರೆ ಅದು ಅಮೃತ ಬಿಂದುವಿನಷ್ಟು ಪವಿತ್ರವಾಗಿರಬೇಕು.
ನಮ್ಮ ನಿತ್ಯಜೀವನದಲ್ಲಿ ಈ ವಿಚಾರಗಳನ್ನೆಲ್ಲ ತಿಳಿದು ನಾವು ಮಾತನಾಡುವ ರೀತಿ ನೀತಿಯನ್ನು ಚೆನ್ನಾಗಿ ತಿಳಿದು ಇತಿಮಿತಿಯಲ್ಲಿ ನಾಲಗೆಯನ್ನು ಉಪಯೋಗಿಸಿ ಇತರರಿಗೆ ನಮ್ಮ ನುಡಿಯಿಂದ ಯಾವುದೇ ನೋವಾಗದಂತೆ ನೋಡಿಕೊಂಡು ಸಮಯಕ್ಕೆ ಸರಿಯಾಗಿ ವ್ಯಕ್ತಿಗೆ ಸರಿಯಾಗಿ ಭಾವನೆಗಳಿಗೆ ಸರಿಯಾಗಿ ವಿಚಾರಕ್ಕೆ ಸರಿಯಾಗಿ ಪರಿಸರಕ್ಕೆ ಸಮಾಜಕ್ಕೆ ಉಪಯುಕ್ತವಾದ ಮಾತುಗಳನ್ನು ಹಾಡಿ ಹಾಡಿ ಜೀವನವನ್ನು ಉತ್ತಮ ರೀತಿಯಲ್ಲಿ ಧನ್ಯ ರಾಗೋಣ.
ಪ್ರತಿಮಾ ಹೆಬ್ಬಾರ್