-->
ಅಕ್ಷರ ಮಾತೆಯ ಬಗ್ಗೆ ಜಯಲಕ್ಷ್ಮಿ ಯವರ ಲೇಖನ

ಅಕ್ಷರ ಮಾತೆಯ ಬಗ್ಗೆ ಜಯಲಕ್ಷ್ಮಿ ಯವರ ಲೇಖನ



"ಅಕ್ಷರ ಜ್ಯೋತಿಯ ಬೆಳಗಿದ ಅಕ್ಷರಮಾತೆ ಸಾವಿತ್ರಿ ಬಾಯಿ ಪುಲೆ"

"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ"..." ಹೆಣ್ಣು ಕುಟುಂಬದ ಕಣ್ಣು "...ಎಂಬ ಮಾತು ಅಕ್ಷರಶಃ ಸತ್ಯ ಎಂಬುದಕ್ಕೆ 19ನೇ ಶತಮಾನದಲ್ಲಿ ಹೆಣ್ಣುಮಕ್ಕಳಿಗೆ ,ಅಬಲೆಯರಿಗೆ, ದೀನ ದಲಿತರಿಗೆ,ಅಸಹಾಯಕರಿಗೆ, ಸಮಾಜದ ಕಟ್ಟ ಕಡೆಯ ಜನರಿಗೆ ಅಕ್ಷರದ ಅರಿವನ್ನು ಮೂಡಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆಯವರು.....

ಸಾವಿತ್ರಿಬಾಯಿ ಫುಲೆಯವರು  1831 ಜನವರಿ 3ರಂದು ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್ ನಲ್ಲಿ ಜನಿಸಿದರು. ಸಾವಿತ್ರಿಬಾಯಿಗೆ 8 ವರ್ಷವಾದಾಗ ಜ್ಯೋತಿಬಾ ಪುಲೆಯವರೊಂದಿಗೆ ಬಾಲ್ಯವಿವಾಹ ವಾಯಿತು. ಸಾವಿತ್ರಿಬಾಯಿ ಅವರಿಗೆ ಪತಿಯಾಗಿ, ಗುರುವಾಗಿ, ಹಿತಚಿಂತಕನಾಗಿ, ಜೀವನದುದ್ದಕ್ಕೂ ಮಾರ್ಗದರ್ಶಕರಾಗಿ ಜೊತೆಯಾದವರು ಅವರ ಪತಿ ಜ್ಯೋತಿಬಾ ಪುಲೆಯವರು...

ಸಾವಿತ್ರಿಬಾಯಿ ಫುಲೆಯವರು ತಮ್ಮ 17ನೇ ವಯಸ್ಸಿನಲ್ಲಿ ಶಿಕ್ಷಕರ ತರಬೇತಿ ಪಡೆದ ನಂತರ  ಶ್ರೀ ಬಿಡೆ ಅವರ ಮನೆಯಲ್ಲಿ ಆರಂಭಗೊಂಡ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇರಿದರು.
ಆಗಿನಕಾಲದಲ್ಲಿ ಮಹಿಳೆಯೊಬ್ಬಳು ಶಿಕ್ಷಕಿ ಆಗುವುದು, ಸಮಾಜಕ್ಕೆ, ಧರ್ಮಕ್ಕೆ, ದ್ರೋಹ ಬಗೆದಂತೆ ಎಂಬ ಭಾವನೆ ಇದ್ದ ಸಂದರ್ಭದಲ್ಲಿ ಹಲವಾರು ಅವಮಾನಗಳನ್ನು ಸಾವಿತ್ರಿ ಯವರು ಎದುರಿಸಬೇಕಾಯಿತು.. ಶಾಲೆಗೆ ಹೋಗುವ ದಾರಿಯಲ್ಲಿ ಇವರನ್ನು ನೋಡಿ ನಕ್ಕವರು  ಅದೆಷ್ಟೋ.... ಇವರ ಮೇಲೆ ಕೆಸರು, ಸೆಗಣಿ ನೀರನ್ನು ಎರಚಿ , ಕಲ್ಲನ್ನು ತೂರಿ ಸಂತೋಷ ಪಟ್ಟವರು ಇನ್ನೆಷ್ಟೋ...
ಇದ್ಯಾವುದಕ್ಕೂ ಜಗ್ಗದ ಸಾವಿತ್ರಿಯವರು ತನ್ನ ಚೀಲದಲ್ಲಿ ಯಾವಾಗಲೂ ಇನ್ನೊಂದು ಸೀರೆಯನ್ನು ಇಟ್ಟುಕೊಳ್ಳುತ್ತಿದ್ದರು.. ವಿದ್ಯಾರ್ಥಿಗಳು ಬರುವ ಮುನ್ನ ಕೆಸರು ,ಸೆಗಣಿಯಾದ ಸೀರೆಯನ್ನು ಒಗೆದು  ಹಾಕಿ   ಚೀಲದಲ್ಲಿದ್ದ ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಸಿದ್ಧರಾಗುತ್ತಿದ್ದರು...

 ಸಾವಿತ್ರಿಬಾಯಿಯವರ ಎಲ್ಲ ಹೋರಾಟದಲ್ಲಿ ಹೆಜ್ಜೆಗೆ ಹೆಜ್ಜೆ ಇಟ್ಟು ಜೊತೆಯಾದವರು ಅವರ ಪತಿ ಜ್ಯೋತಿಬಾ ಪುಲೆಯವರು...
ಸಮಾಜದಲ್ಲಿ ಅಸಹಾಯಕರು, ಕೂಲಿಕಾರ್ಮಿಕರು ,ಹಿಂದುಳಿದ ವರ್ಗದವರು ,ಅಬಲೆಯರಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಕೊಂಡು ಪತಿ ಜ್ಯೋತಿಬಾಪುಲೆ ಯವರ ಜೊತೆ ಸೇರಿ ಸುಮಾರು 14 ಪಾಠ ಶಾಲೆಗಳನ್ನು ತೆರೆದು ಶಿಕ್ಷಣವನ್ನು ಎಲ್ಲಾ ವರ್ಗದ ಜನರಿಗೆ ನೀಡುವಲ್ಲಿ ಯಶಸ್ವಿಯಾದರು....

 ಶಾಲೆಯಲ್ಲಿ ಶಿಕ್ಷಕಿಯಾಗಿ, ಮುಖ್ಯೋಪಾಧ್ಯಾಯರಾಗಿ, ಸಂಚಾಲಕಿಯಾಗಿ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಪತಿ ಜ್ಯೋತಿಬಾ ಪುಲೆಯವರ ಜೊತೆ ಸೇರಿ ಸಮಾಜದ ಅನಿಷ್ಠ ಪದ್ಧತಿಗಳಾದ ಬಾಲ್ಯವಿವಾಹ , ವಿಧವೆಯರ ಕೇಶಮುಂಡನ , ಸತಿಸಹಗಮನ ಪದ್ಧತಿಯ ವಿರುದ್ಧ ಹೋರಾಟ ಮಾಡಿ, ಮಹಿಳೆಯರಿಗಾಗಿ ಪ್ರಪ್ರಥಮ 
 ಶಾಲೆ ಮತ್ತು ಅಬಲಾಶ್ರಮವನ್ನು ಆರಂಭಿಸಿ ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ( India's First lady teacher) ಕೀರ್ತಿ ಸಾವಿತ್ರಿಬಾಯಿ ಫುಲೆ ಅವರಿಗೆ ಸಲ್ಲುತ್ತದೆ....

ಸಾವಿತ್ರಿಬಾಯಿ ಫುಲೆಯವರು ಶಿಕ್ಷಕಿಯ ಕಾರ್ಯದ ಜೊತೆಜೊತೆಗೆ ಲೇಖಕಿಯಾಗಿಯೂ ಯಶಸ್ವಿಯಾಗಿದ್ದಾರೆ... 1854 ರಲ್ಲಿ ಕಾವ್ಯಪೂಲೆ ( ಕಾವ್ಯ ಅರಳಿದೆ) ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.. ಅಲ್ಲದೆ ಜ್ಯೋತಿಬಾ ಪುಲೆಯವರ ನ್ನು ಒಳಗೊಂಡಂತೆ ಬರೆದ ಬಯೋಗ್ರಫಿ " ಭವನ ಕಾಶಿ ಸುಭೋದ ರತ್ನಾಕರ್" ( ಮುತ್ತುಗಳ ಸಾಗರ) ಎಂಬ ಕೃತಿಯನ್ನು 1891 ರಲ್ಲಿ  ರಚಿಸಿದ್ದಾರೆ....

ಮಹಾರಾಷ್ಟ್ರದ ಪುಣೆಯಲ್ಲಿ ಪ್ಲೇಗ್ ರೋಗ ಬಂದಾಗ ರೋಗ ಪೀಡಿತ ರೋಗಿಗಳ ಸೇವೆಯಲ್ಲಿ ಸಾವಿತ್ರಿಬಾಯಿಯವರು ತೊಡಗಿದ್ದರು ..ಆ ಸಂದರ್ಭದಲ್ಲಿ ಸ್ವತಹ ತಾವೇ ಆ  ಕಾಯಿಲೆಯ ಸೋಂಕಿಗೆ ಬಲಿಯಾಗಿ  1897 ಮಾರ್ಚ್ 10ರಂದು ವಿಧಿವಶರಾದರು... ಅಬಲೆಯರ, ದೀನರ ಆಶಾಜ್ಯೋತಿ ನಂದಿಹೋಯಿತು...


"ಸಮಾಜದಲ್ಲಿ ಹುಟ್ಟುವ ಎಲ್ಲಾ ಮಕ್ಕಳು ಭೂಮಿಯ ಮೇಲಿನ ಮಿನುಗುವ ನಕ್ಷತ್ರಗಳು " ಎಂದು ಭಾವಿಸಿದ್ದ ಪುಲೆ ದಂಪತಿ ಗಳು ಸಮಾಜದ ಏಳಿಗೆಗಾಗಿ ಶಿಕ್ಷಣದ ಮಹತ್ವವನ್ನು ಅರಿತಿದ್ದರು..

"ಶಿಕ್ಷಣವು ಸಮಾಜವನ್ನು ಬದಲಾವಣೆ ಮಾಡುವ ಅಸ್ತ್ರ"...  ಮಹಿಳೆ ಶಿಕ್ಷಣವನ್ನು ಪಡೆದರೆ ಸಮಾಜದಲ್ಲಿ ಏನೆಲ್ಲ ಬದಲಾವಣೆಯನ್ನು ಮಾಡಬಹುದು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟ ಮಹಾತಾಯಿ ಸಾವಿತ್ರಿಬಾಯಿ ಫುಲೆಯವರು... ಇಂತಹ ಮಹಾತಾಯಿಯ ಸರಳತೆ, ಸಾಧನೆಯ ಹಾದಿಯನ್ನು, ಹೋರಾಟದ ಮನೋಭಾವನೆಯನ್ನು , ಸಾಮಾಜಿಕ ಕಳಕಳಿಯನ್ನು, ಛಲದ ಬದುಕಿನ ಪುಟವನ್ನು ಇಂದಿನ ಮಕ್ಕಳಿಗೆ ಅನಾವರಣ ಮಾಡುವ ಮೂಲಕ ಜನವರಿ 3 ರಂದು ಭಾರತದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ನಾವೆಲ್ಲರೂ ಈ ಮಹಾನ್ ಚೇತನಕ್ಕೆ ನಮನ ಸಲ್ಲಿಸಬೇಕೆಂದೇ ನಮ್ಮ ಆಶಯ....

ಜಯಲಕ್ಷ್ಮೀ ಜಿ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ
ಬಂಟ್ವಾಳ

Ads on article

Advertise in articles 1

advertising articles 2

Advertise under the article