
ಮಕ್ಕಳ ಪ್ರತಿಭೆ ಬೆಳೆಯಲು ಪೋಷಕರ ಪ್ರೋತ್ಸಾಹ ಅಗತ್ಯ......ಜೋಳಿಗೆಯ ಮಾತಿನಲ್ಲಿ ವೀಣಾ ಡೆಸಾ..
Sunday, December 12, 2021
ಹುಟ್ಟಿನಿಂದ ಸಾವಿನ ವರೆಗೆ ಜೀವನ ಶಿಕ್ಷಣ ಕಲಿಯುತ್ತಲೇ ಇರುತ್ತೇವೆ. ಆದರೆ ಪ್ರತಿಭೆಗಳು ಜನ್ಮದತ್ತವಾಗಿ ದೊರೆತಿರುತ್ತವೆ. ಹೇಗೆ ದೈಹಿಕ ಬೆಳವಣಿಗೆಗೆ ನಾವು ತಿನ್ನುವಂತಹ ಆಹಾರದಲ್ಲಿನ ಪೋಷಕಾಂಶಗಳು ಸಹಕರಿಸುತ್ತವೆಯೋ ಹಾಗೆಯೇ ನಮ್ಮ ಮಾನಸಿಕ ಬೆಳವಣಿಗೆಗೆ ನಮ್ಮಲ್ಲಿರುವ ಪ್ರತಿಭೆಗಳು ಸಹಕಾರಿಯಾಗಿವೆ. ಆದರೆ ಸುಪ್ತವಾಗಿರುವ ಅವುಗಳನ್ನು ಹುಡುಕಿ, ಸೂಕ್ತವಾಗಿ ಪೋಷಿಸಿ ಬೆಳೆಸಬೇಕಾಗಿದೆ. ಈ ಬೆಳವಣಿಗೆಗೆ ಸೂಕ್ತ ವೇದಿಕೆಯೇ *ಮಕ್ಕಳ ಜೋಳಿಗೆ*. ಪ್ರತಿಯೊಂದು ಮಗುವೂ ಒಂದಲ್ಲ ಒಂದು ರೀತಿಯ ಪ್ರತಿಭೆಯೊಂದಿಗೆ ಹುಟ್ಟಿ ಬಂದಿದ್ದು ಆ ಪ್ರತಿಭೆಗಳಿಗೆ ಸೂಕ್ತ ಪೋಷಕಾಂಶಗಳನ್ನು ಒದಗಿಸಿ, ಬೆಳೆಸುವುದು ಶಿಕ್ಷಕರು ಪೋಷಕರಾದ ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಮಕ್ಕಳು ಬೆಳೆಯುತ್ತಾ ನಾನಾ ಕಾರಣಗಳಿಂದ ಮಾನಸಿಕ ವೇದನೆಗಳಿಗೆ ಒಳಪಡುತ್ತಾರೆ. ಈ ಸಂದರ್ಭದಲ್ಲಿ ಅವರು ಕೆಲವೊಂದು ಅನಪೇಕ್ಷಿತ ಕೆಟ್ಟ ಸಂಗತಿಗಳನ್ನು ತಮ್ಮದಾಗಿಸಿಕೊಂಡು ಅದೇ ದಾರಿಯಲ್ಲಿ ಮುಂದುವರೆದು ಸಮಾಜ ಘಾತುಕ ವ್ಯಕ್ತಿಯಾಗಿ ಬೆಳೆಯಬಹುದು ಅಥವಾ ಸಮಾಜದಲ್ಲಿ ಕೀಳರಿಮೆ ಇರುವ ವ್ಯಕ್ತಿಯಾಗುವ ಸಾಧ್ಯತೆ ಇದೆ. ಒಬ್ಬ ವ್ಯಕ್ತಿಯ ಜೀವನದ ಒಂದು ದುರಂತವನ್ನು ತಪ್ಪಿಸಲು ಆತನ ಎಳೆಯ ಮನಸ್ಸನ್ನು, ಮನಸ್ಸಿನ ಭಾವನೆಗಳನ್ನು ಬೇರೆಯೆ ಯೋಚನೆಗಳಿಗೆ ಒಳಪಡಿಸಿ ಧನಾತ್ಮಕ ಚಿಂತನೆ ನೀಡಲು ಮತ್ತು ಆ ಚಿಂತನೆಯಲ್ಲೇ ಮಗ್ನವಾಗಿಸಿ, ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ನೋವನ್ನು ನಲಿವಾಗಿ ಪರಿವರ್ತಿಸಲು ಆತನಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ, ವೃದ್ಧಿಸಬೇಕಾದ ಅವಶ್ಯಕತೆ ಇದೆ. ಆತನಲ್ಲಿ ಬೆಳೆದಿರುವ ಪ್ರತಿಭೆಗಳಿಗೆ ಇನ್ನಷ್ಟು ಪುಷ್ಟಿ ನೀಡಿ ಪ್ರೋತ್ಸಹಿಸುವ ನಿಟ್ಟಿನಲ್ಲಿ ಒಂದು ಉತ್ತಮ ಅವಕಾಶ ಕಲ್ಪಿಸಿರುವ *ಮಕ್ಕಳ ಜೋಳಿಗೆ* ಗೆ ಶುಭ ಹಾರೈಕೆಗಳು. ಈ ಜೋಳಿಗೆ ದಿನಂಪ್ರತಿ ತುಂಬಿ ತುಳುಕುವಂತಾಗಲಿ.
ವೀಣಾ ಡೆಸಾ
ಸಹಶಿಕ್ಷಕಿ
ಎನ್ ಎಸ್ ಬಿ ಸರಕಾರಿ ಪ್ರಾಥಮಿಕ ಶಾಲೆ
ದೇರಳಕಟ್ಟೆ